ಬೆಂಗಳೂರು: ವಿಧಾನಸಭೆ ಅಧಿವೇಶನ (Vidhan Sabha Session) ಅಂತ್ಯಕ್ಕೆ ಎರಡು ದಿನ ಬಾಕಿ ಇರುವಂತೆಯೇ ಸದನದಲ್ಲಿ ಮೂಡಾ ಹಗರಣ (MUDA Scam) ಕೋಲಾಹಲ ಸೃಷ್ಟಿಸಿದೆ. ಇಂದು ಮೈತ್ರಿ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುಟುಂಬದ ವಿರುದ್ಧ ಕೇಳಿ ಬಂದಿರುವ ಮುಡಾ ಬದಲಿ ನಿವೇಶನ ಹಂಚಿಕೆ ಆರೋಪದ ಕುರಿತು ಬಿಜೆಪಿ (BJP) ಹೋರಾಟವನ್ನು ತೀವ್ರಗೊಳಿಸಿದೆ. ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಈಗ ವಿಧಾನಸಭೆ-ಪರಿಷತ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಶನಿವಾರದ ನಂತರ ಮೈಸೂರಿಗೆ ಪಾದಯಾತ್ರೆ (Mysuru Padayatra) ನಡೆಸುವ ಕುರಿತು ಆಲೋಚಿಸಿದೆ.
ಈ ವಿಷಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B. Y. Vijayendra) ಮಾತನಾಡಿ, ವಾಲ್ಮೀಕಿ-ಮುಡಾ ಹಗರಣಗಳ ಸಂಬಂಧ ಹೋರಾಟಕ್ಕೆ ಆಡಳಿತ ಪಕ್ಷದಿಂದಲೇ ಒತ್ತಡ ಇದೆ. ಇಷ್ಟು ದೊಡ್ಡ ಹಗರಣ ನಡೆದಿದೆ. ನೀವೇನೂ ಹೋರಾಟ ಮಾಡುದಿಲ್ಲವೇ ಎಂದೇ ಅವರೇ ನಮ್ಮನ್ನು ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಡಾ ಹಗರಣದ ಬಗ್ಗೆ ವಿವರಣೆ ನೀಡುವಂತೆ ಮುಖ್ಯಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದ ಹಿನ್ನೆಲೆಯಲ್ಲಿ ರಾಜಭವನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಸುಮಾರು 40 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.
ಇದಕ್ಕೂ ಮುನ್ನ ಬೆಳಗ್ಗೆ ವಿಧಾನಸಭೆಯಲ್ಲಿ ವಾಕ್ಸಮರ ನಡೆಯಿತು. ನಿಲುವಳಿ ಸೂಚನೆಗೆ ವಿಪಕ್ಷ ನಾಯಕ ಅಶೋಕ್ (R Ashok) ಮುಂದಾದರು. ಚರ್ಚೆಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು. ಅಶೋಕ್ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಅಷ್ಟು ಅರ್ಜೆಂಟ್ ಇದ್ದರೆ ಕಳೆದ ವಾರವೇ ಪ್ರಸ್ತಾಪ ಮಾಡಬೇಕಿತ್ತು. ಪ್ರಶ್ನೋತ್ತರ ಮುಗಿದ ಬಳಿಕ ತೆಗೆದುಕೊಳ್ಳೋಣ ಎಂದು ಹೇಳಿದರು. ಹೀಗಾಗಿ ಇದು ಕೋಲಾಹಲಕ್ಕೆ ಕಾರಣವಾಯಿತು.








