ಭಾರತದ ರೂಪಾಂತರಿ ಕೊರೊನಾ ವೈರಸ್ ಅತಿ ಹೆಚ್ಚು ಅಪಾಯಕಾರಿ – ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ: ಭಾರತದಲ್ಲಿ ಕೋವಿಡ್ 2ನೇ ಅಲೆ ಹಿಂದೆಂದಿಗಿಂತಲೂ ಭಯಾನಕವಾಗಿದ್ದು, ದಿನೇ ದಿನೇ ಸೋಂಕಿತರು ಆಕ್ಸಿಜನ್ ಕೊರತೆ , ಬೆಡ್ ಸಿಗದೇ , ಚಿಕಿತ್ಸೆ ಸಿಗದೇ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಅದ್ರಲ್ಲೂ ಬಾರತದಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೊನಾ ವೈರಸ್ ಅತಿ ವೇಗವಾಗಿ ಹಬ್ಬುವ ಸಾಮರ್ಥ್ಯವನ್ನೂ ಹೊಂದಿದೆ. ಅಲ್ಲದೇ ಹೆಚ್ಚು ಅಪಾಯಕಾರಿಯೂ ಆಗಿದೆ. ಈ ರೂಪಾಂತರಿ ಕೊರೊನಾ ವೈರಾಣುವಿನ ಗುಣಲಕ್ಷಣಗಳನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ರೂಪಾಂತರಗೊಂಡಿರುವ ಕೊವಿಡ್ 19 ಮಾದರಿಯು ಚಿಂತೆಗೀಡುಮಾಡುವ ತಳಿಯಾಗಿದೆ ಎಂದು ಅಭಿಪ್ರಾಯ ತಿಳಿಸಿದೆ.
ಸಂಯುಕ್ತ ರಾಷ್ಟ್ರಗಳ ಆರೋಗ್ಯ ಒಕ್ಕೂಟವೂ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತದಲ್ಲಿ ಮೊದಲ ಬಾರಿಗೆ ಕಳೆದ ಅಕ್ಟೋಬರ್ ವೇಳೆಯಲ್ಲಿ ಕಂಡುಬಂದ B.1.617 ರೂಪಾಂತರಿ ಮಾದರಿಯು ಕೊವಿಡ್ 19 ಮೂಲ ವೈರಾಣುವಿಗಿಂತ ಪರಿಣಾಮಕಾರಿಯಾಗಿದ್ದು, ವೇಗವಾಗಿ ಹಬ್ಬುತ್ತಿದೆ. ಅಲ್ಲದೇ, ಸದರಿ ರೂಪಾಂತರಿ ಕೊರೊನಾ ಲಸಿಕೆಗೆ ಪ್ರತಿರೋಧ ಒಡ್ಡುವ ಗುಣಗಳನ್ನು ಬೆಳೆಸಿಕೊಂಡಿರುವ ಸಾಧ್ಯತೆಯೂ ಇದೆ ಎಂಬ ಆತಂಕ ವ್ಯಕ್ತಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್ 19 ನಿರ್ವಹಣಾ ವಿಭಾಗದ ಮುಖ್ಯಸ್ಥರಾಗಿರುವ ಮರಿಯಾ ವ್ಯಾನ್ ಕೇರ್ಕೋವೇ ಸಹ ಭಾರತೀಯ ರೂಪಾಂತರಿ ಬಗ್ಗೆ ಮಾತನಾಡಿ, ಈ ಬಗ್ಗೆ ಲಭ್ಯವಿರುವ ಕೆಲ ಮಾಹಿತಿಗಳನ್ನು ಗಮನಿಸಿದರೆ ಭಾರತದಲ್ಲಿ B.1.617 ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎನ್ನುವುದು ಕಂಡುಬರುತ್ತದೆ. ಸದ್ಯ ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಾಣುವಿನ ವಿವಿಧ ಮಾದರಿಗಳನ್ನು ವಿಂಗಡಿಸಿ ನೋಡಲಾಗುತ್ತಿದ್ದು, ಭಾರತೀಯ ರೂಪಾಂತರಿ ಮಾದರಿಯನ್ನು ಚಿಂತೆಗೀಡುಮಾಡುವ ತಳಿಯೆಂದು ಪರಿಗಣಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ವಿಶ್ವ ಮಟ್ಟದಲ್ಲಿ ಭಾರತವು ಅತ್ಯಂತ ಕೆಟ್ಟ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 3 ಲಕ್ಷದ 70 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,700 ಸೋಂಕಿತರು ಮೃತಪಟ್ಟಿದ್ದಾರೆ. ಎರಡನೇ ಅಲೆ ಭಾರತದಲ್ಲಿ ಬೀರುತ್ತಿರುವ ಪರಿಣಾಮ ಅತ್ಯಂತ ಗಂಭೀರವಾಗುತ್ತಿದ್ದು, ತಜ್ಞರ ಪ್ರಕಾರ ದಾಖಲೆಗಳಲ್ಲಿ ಇರುವ ಅಂಕಿ ಅಮಶಗಳಿಗಿಂತಲೂ ಹೆಚ್ಚು ಸಾವು ನೋವು ದೇಶದಲ್ಲಿ ಆಗುತ್ತಿದೆ ಎಂಬ ಅನುಮಾನವಿದೆ.
ಇಷ್ಟು ದಿನ ಭಾರತದಲ್ಲಿ ಎರಡನೇ ಅಲೆಗೆ B.1.617 ಕಾರಣವಿರಬಹುದು ಎಂಬ ಅನುಮಾನ ಇತ್ತಾದರೂ ಅದನ್ನು ಹೊಸ ಮಾದರಿಯೆಂದು ಗಮನಿಸಲಾಗುತ್ತಿತ್ತು. ಇದೀಗ ಸದ್ಯದ ಬೆಳವಣಿಗೆಗಳನ್ನು ಅವಲೋಕಿಸಿದ ನಂತರ ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿ ವೈರಾಣುಗಳ ಸಾಲಿಗೆ ಭಾರತೀಯ ಮಾದರಿಯನ್ನೂ ಸೇರಿಸಲಾಗಿದ್ದು, ಚಿಂತೆಗೀಡುಮಾಡುವ ಮಾದರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ.
ಭಾರತದಲ್ಲಿಂದು ಕೊರೊನಾ ಅಬ್ಬರ ತುಸು ಕಗ್ಗಿದಂತೆ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,29,942 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದೊಂದು ವಾರಕ್ಕೆ ಹೋಲಿಸಿದರೆ ಇದೇ ಮೊದಲ ಬಾರಿಗೆ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,29,942 ಕೋವಿಡ್ ಕೇಸ್ ಗಳು ಪತ್ತೆಯಾಗಿದ್ದು, 3,876 ಮಂದಿ ಮಾರಕ ಸೋಂಕಿನಿಂದ ಉಸಿರು ನಿಲ್ಲಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 2,29,92,517 ಹಾಗೂ ಮೃತರ ಸಂಖ್ಯೆ 2,49,992ಕ್ಕೆ ಹೆಚ್ಚಳವಾಗಿದೆ. ಇನ್ನು ನಿನ್ನೆ ಒಂದೇ ದಿನ 3,56,082 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಈವರೆಗೆ ಒಟ್ಟು 1,90,27,304 ಸೋಂಕಿತರು ಗುಣಮುಖರಾಗಿ, ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಭಾರತದಲ್ಲೀಗ 37,15,221 ಕೊರೊನಾ ಕೇಸ್ ಗಳು ಸಕ್ರಿಯವಾಗಿವೆ.







