ಬೆಂಗಳೂರು: ನೈಟ್ ಕರ್ಫ್ಯೂ ನಿರ್ಧಾರವನ್ನು ಬಹಳ ವಿವೇಚನೆಯಿಂದಲೇ ಕೈಗೊಳ್ಳಲಾಗಿತ್ತು. ಅದೇನೂ ರಾಜಕೀಯ ನಿರ್ಧಾರ ಅಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ವಿವೇಚನೆ ಇಲ್ಲದೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸುಧಾಕರ್, ಮಾಧ್ಯಮಗಳಲ್ಲಿ ಎಡಬಿಡಂಗಿ ಸರ್ಕಾರ ಎನ್ನಲಾಗಿದೆ. ಆದರೆ ಇದೇ ನಮ್ಮ ಸರ್ಕಾರ ಉತ್ತಮವಾದ ನಿರ್ಧಾರಗಳಿಂದ ಕೊರೊನಾ ನಿಯಂತ್ರಣಕ್ಕೆ ತಂದಿದೆ. ರಾಜ್ಯ ಸರ್ಕಾರದ ಕ್ರಮಗಳಿಂದಾಗಿ ಕೊರೊನಾ ಸೋಂಕಿಗೊಳಗಾದವರಲ್ಲಿ 97.5% ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಕೊರೊನಾದಿಂದ ಸಾವಿನ ಪ್ರಮಾಣ 1.22%ಗೆ ಇಳಿಕೆಯಾಗಿದೆ. ಬ್ರಿಟನ್ನಲ್ಲಿ ಲಾಕ್ಡೌನ್ ಆಗಿದೆ ಹಾಗೂ ಜರ್ಮನಿಯಲ್ಲಿ ರಾತ್ರಿ ಕರ್ಫ್ಯೂ ಆಗಿದೆ. ಹಾಗೆಂದು ಅಲ್ಲಿರುವವರಿಗೆ ಬುದ್ಧಿ ಇಲ್ಲ ಎಂದರ್ಥವಲ್ಲ. ನಮ್ಮ ಸರ್ಕಾರ ಯಾವುದೇ ರಾಜಕೀಯ ತೀರ್ಮಾನ ಕೈಗೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರ ಜೊತೆ ಕೂಲಕಂಷವಾಗಿ ಚರ್ಚಿಸಿ ಪ್ರತಿಯೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾತ್ರಿ ಕರ್ಫ್ಯೂ ಕುರಿತು ಕೂಡ ಹಲವಾರು ಬಾರಿ ಚರ್ಚಿಸಿ, ಜನರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಆರ್ಥಿಕ ಚಟುವಟಿಕೆ ಬಂದ್ ಮಾಡಿದರೆ ಸರ್ಕಾರಕ್ಕೆ ನಷ್ಟವಾಗುತ್ತದೆ. ಆದರೂ ಜನರ ಆರೋಗ್ಯಕ್ಕಾಗಿ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಅನೇಕರು ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಮರೆತಿದ್ದಾರೆ. ಇಂತಹ ಸಮಯದಲ್ಲಿ ಜನರನ್ನು ಎಚ್ಚರಿಸುವುದು ನಮ್ಮ ಕರ್ತವ್ಯ ಎಂದರು.
10 ಜನರಿಗೆ ಕೊರೊನಾ ಪಾಟಿಸಿವ್
ಬ್ರಿಟನ್ನಿಂದ ರಾಜ್ಯಕ್ಕೆ ಬಂದವರಲ್ಲಿ 10 ಜನರಿಗೆ ಕೊರೊನಾ ಪಾಟಿಸಿವ್ ಆಗಿದೆ ಎಂದು ತಿಳಿದುಬಂದಿದ್ದು, ಹತ್ತು ಜನರ ಮಾದರಿಯನ್ನು ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ ಎಂದ ಸಚಿವ ಡಾ.ಕೆ.ಸುಧಾಕರ್, ಜೆನೆಟಿಕ್ ಸೀಕ್ವೆನ್ಸ್ ಮಾಡಲು 2-3 ದಿನ ಬೇಕಾಗುತ್ತದೆ. ಒಂದು ವೇಳೆ ಅವರಲ್ಲಿ ಹೊಸ ಪ್ರಭೇದದ ವೈರಸ್ ಇರುವುದು ಖಚಿತವಾದರೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ದಸರಾ, ದೀಪಾವಳಿ, ಗಣೇಶ ಚತುರ್ಥಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿದೆ. ಆದರೆ ಹೊಸ ವರ್ಷದಂದು ಯುವಜನತೆ ಮೋಜು ಮಸ್ತಿ ಮಾಡಲೇಬೆಕೆನ್ನುವಂತೆ ಪ್ರತಿಪಕ್ಷಗಳವರು ವ್ಯಾಖ್ಯಾನ ಮಾಡಿದ್ದಾರೆ. ಜನರಿಗೆ ತೊಂದರೆಯಾದರೆ ಅವರೇ ಜವಾಬ್ದಾರಿ ಹೊರುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಸಂಸದ ಡಿ.ಕೆ.ಸುರೇಶ್ ನೀಡುವ ಸರ್ಟಿಫಿಕೇಟ್ ಅಗತ್ಯವಿಲ್ಲ. ಜಾಮೀನಿನ ಮೇಲೆ ಹೊರಗೆ ಇರುವವರೇ ಆರೋಪ ಮಾಡುತ್ತಾರೆ. ಮೋಜು, ಮಸ್ತಿ, ಭ್ರಷ್ಟಾಚಾರದ ಆರೋಪ ಹೊತ್ತುಕೊಂಡು ಜಾಮೀನಿನ ಮೇಲೆ ಹೊರಗೆ ಇರುವವರು ಯಾರು ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಡಿಕೆ ಬ್ರದರ್ಸ್ಗೆ ಸುಧಾಕರ್ ತಿರುಗೇಟು ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel