ನವದೆಹಲಿ: ಜಗತ್ತನ್ನೇ ತಲ್ಲಣಗೊಳಿಸಿರುವ ಹೆಮ್ಮಾರಿ ಕೊರೊನಾ ಸೋಂಕು ಭಾರತವನ್ನು ಕೂಡ ಕಂಗೆಡಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.ಕಳೆದ 24 ಗಂಟೆಗಳಲ್ಲಿ 1,336 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 18,601ಕ್ಕೆ ಏರಿದೆ. ಅಲ್ಲದೆ 47 ಸೋಂಕಿತರು ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಸದ್ಯ 14,759 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 3,252 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ದೇಶಾದ್ಯಂತ ಒಟ್ಟಾರೆ 590 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.
ತನ್ನ ದಿನನಿತ್ಯದ ವಿವರಣೆಯಯಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿನ್ನೆ ಪ್ರಕಟಣೆ ಹೊರಡಿಸಿ, ಶೇಕಡಾ 80ರಷ್ಟು ಕೋವಿಡ್-19 ರೋಗಿಗಳು ಸೋಂಕಿನ ವಿವಿಧ ಲಕ್ಷಣಗಳನ್ನು ಹೊಂದಿದ್ದಾರೆ. ಲಾಕ್ ಡೌನ್ ಮೊದಲು ದಿನಕ್ಕೆ ಶೇಕಡಾ 7.5ರಷ್ಟಿದ್ದ ಕೊರೋನಾ ಸೋಂಕಿತರ ಸಂಖ್ಯೆ ಲಾಕ್ ಡೌನ್ ನಂತರ ಶೇಕಡಾ 3.4ಕ್ಕೆ ಇಳಿದಿದೆ ಎಂದು ತಿಳಿಸಿದೆ.








