ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ರಕ್ತಬೀಜಾಸುರನಂತೆ ನರ್ತಿಸುತ್ತಿದ್ದು, ಈವರೆಗೆ 3,303 ಮಂದಿಯನ್ನು ಬಲಿ ಪಡೆದುಕೊಂಡಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 5,611 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 140 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇನ್ನು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆಯಾಗಿದ್ದು, ಈವರೆಗೆ 42,309 ಮಂದಿ ಸೋಂಕಿನಿಂದ ಗಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 61,194 ಪ್ರಕರಣಗಳು ಸಕ್ರಿಯವಾಗಿದ್ದು, ಕೊರೊನಾದಿಂದ ಬಳಲುತ್ತಿದ್ದಾರೆ.
ದೇಶಕ್ಕೆ “ಮಹಾ” ಕಂಟಕ
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲು ಪರೋಕ್ಷವಾಗಿ ಮಹಾರಾಷ್ಟ್ರ ಕಾರಣವಾಗಿದೆ. ಇಲ್ಲಿ ನೆಲೆಸಿದ್ದ ಬೇರೆ ರಾಜ್ಯದವರು ಲಾಕ್ ಡೌನ್ ಸಡಿಲಿಕೆ ಯಿಂದಾಗಿ ತಮ್ಮ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಹೀಗೆ ಮುಂಬೈನಿಂದ ಬಂದವರ ಪೈಕಿ ಅರ್ಧದಷ್ಟು ಮಂದಿಗೆ ಕೊರೊನಾ ಸೋಂಕಿರುವುದು ದೃಢವಾಗುತ್ತಿದೆ. ಅಲ್ಲದೇ ಇವರೇ ಗ್ರೀನ್ ಝೋನ್ ಗಳಿಗೂ ಕೊರೊನಾವನ್ನು ಹೊತ್ತು ತರುತ್ತಿದ್ದಾರೆ.
ಸಿಂಹಪಾಲು ಈ ರಾಜ್ಯಗಳದ್ದೇ
ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕು ಹರಡಿದ್ದು, ಈವರೆಗೆ 37,136 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 1,325 ಮಂದಿ ಕೊರೊನಾಗೆ ಬಲಿಯಾಗಿದ್ದು, 9,639 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇನ್ನು ಸೋಂಕು ಅತೀ ಹೆಚ್ಚು ಹರಡಿರುವ ರಾಜ್ಯಗಳಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದ್ದು, ಈವರೆಗೆ 12,448 ಮಂದಿಗೆ ಕೊರೊನಾ ತಗುಲಿದೆ. 85 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇತ್ತ ಗುಜರಾತ್ ನಲ್ಲಿ 12,141 ಮಂದಿ ಸೋಂಕಿಗೆ ತುತ್ತಾಗಿದ್ದು, 719 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10,554 ಮಂದಿ ಕೊರೊನಾಗೆ ತುತ್ತಾಗಿದ್ದು, 166 ಮಂದಿ ಮೃತಪಟ್ಟಿದ್ದಾರೆ. ಸುಮಾರು 4,750 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ.
ರಾಜಸ್ಥಾನದಲ್ಲೂ ಕೊರೊನಾ ಅಬ್ಬರ ಜೋರಾಗಿದ್ದು, 5,845 ಮಂದಿಗೆ ಸೋಂಕು ತಗುಲಿದೆ. 143 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 5,465 ಮಂದಿ ಸೋಂಕಿಗೆ ತುತ್ತಾಗಿದ್ದು, 258 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 4,926ಕ್ಕೆ ಏರಿಕೆಯಾಗಿದ್ದು, 123 ಮಂದಿ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದಲ್ಲಿ 2,489 ಮಂದಿಗೆ ಸೋಂಕು ತಗುಲಿದ್ದು, 52 ಮಂದಿ ಸಾವನ್ನಪ್ಪಿದ್ದಾರೆ. 1,621 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ತೆಲಂಗಾಣದಲ್ಲಿ 1,634 ಮಂದಿ ಕೊರೊನಾಗೆ ತುತ್ತಾಗಿದ್ದು, 38 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಕೇರಳದಲ್ಲಿ 643 ಮಂದಿಯಲ್ಲಿ ಈವರೆಗೆ ಸೋಂಕು ಕಾಣಿಸಿಕೊಂಡಿದ್ದು, 4 ಸೋಂಕಿತರು ಮೃತಪಟ್ಟಿದ್ದಾರೆ. 497 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ.
ಇನ್ನು ಕರ್ನಾಟಕದಲ್ಲಿ ಈವರೆಗೆ 1,395 ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 40ಕ್ಕೆ ಏರಿದೆ. ಒಟ್ಟು 543 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.








