ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಇಂದು ಒಂದೇ ದಿನ 149 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತ ಸಂಖ್ಯೆ 1,395ಕ್ಕೇರಿದೆ. ಇಂದು ಬೆಳಗ್ಗೆ ಬಿಡುಗಡೆಯಾದ ಬುಲೆಟಿನ್ ನಲ್ಲಿ 127 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ಸಂಜೆಯ ಬುಲೆಟಿನ್ ನಲ್ಲಿ ಈ ಸಂಖ್ಯೆ 149ಕ್ಕೆ ಏರಿಕೆಯಾಗಿದೆ.
ಇನ್ನು ಸದ್ಯ ರಾಜ್ಯದಲ್ಲಿ 811 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರೆ, 543 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 40 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ಮಂಡ್ಯ 71, ದಾವರಣಗೆರೆ 22, ಕಲಬುರಗಿ 13, ಶಿವಮೊಗ್ಗ 10, ಬೆಂಗಳೂರು 6, ಚಿಕ್ಕಮಗಳೂರು 5, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 4, ವಿಜಯಪುರ, ಬೀದರ್, ಯಾದಗಿರಿ, ಗದಗ, ರಾಯಚೂರು ಜಿಲ್ಲೆಗಳಲ್ಲಿ ತಲಾ 1 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರಲ್ಲಿ 113 ಮಂದಿ ಹೊರ ರಾಜ್ಯದ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಮಂಡ್ಯದ 71 ಸೋಂಕಿತರು ಮುಂಬೈ ಹಿನ್ನೆಲೆಯನ್ನು ಹೊಂದಿದ್ದಾರೆ.
ಇದರ ಮಧ್ಯೆ ರಾಜ್ಯದಲ್ಲಿ ಮೂರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ರೋಗಿ ಸಂಖ್ಯೆ 1,185, 61 ವರ್ಷದ ಪುರುಷ, ಬಳ್ಳಾರಿ ಜಿಲೆಯ ನಿವಾಸಿಯಾಗಿದ್ದು, ಮೇ 19 ರಂದು ಬಳ್ಳಾರಿಯ ಜಿಲ್ಲೆಯ ನಿಗಧಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ನಿಧನ ಹೊಂದಿದ್ದಾರೆ. ಕೋವಿಡ್ ಪರೀಕ್ಷೆಯ ಬಳಿಕ ಅವರಿಗೆ ಪಾಸಿಟಿವ್ ಎಂದು ದೃಢಪಟ್ಟಿತ್ತು.
ರೋಗಿ ಸಂಖ್ಯೆ 1,291, 65 ವರ್ಷದ ಪುರುಷ, ವಿಜಯಪುರ ಜಿಲ್ಲೆಯ ನಿವಾಸಿಯಾಗಿದ್ದು, ಹೆಚ್.ಟಿ.ಎನ್., ಡಿ.ಎಂ. ಮತ್ತು ಐ.ಹೆಚ್.ಡಿ. ಯಿಂದ ಬಳಲುತ್ತಿದ್ದರು.
ರೋಗಿ ಸಂಖ್ಯೆ 1,364, 54 ವರ್ಷದ ಪುರುಷ ಬೆಂಗಳೂರು ನಗರದ ನಿವಾಸಿಯಾಗಿದ್ದು, ಐ.ಹೆಚ್.ಡಿ. ಯಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 18ರಂದು ಇವರು ಮರಣ ಹೊಂದಿದ್ದು, ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿರುತ್ತದೆ.