ಸಾವಿನಲ್ಲೂ ಇತರರ ಬಾಳಿಗೆ ಬೆಳಕಾದ ನರ್ಸ್ Saaksha Tv
ಚಿಕ್ಕಮಗಳೂರು : ನರ್ಸ್ ಒಬ್ಬರು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಚಿಲ್ಲೆಯ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
22 ವರ್ಷದ ಗಾನವಿಗೌಡ ಮೃತ ಯುವತಿ. ಇವರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಟ್ಟಿನಮನೆ ಸಮೀಪದ ಮಕ್ಕಿ ಮನೆಯ ಗ್ರಾಮದ ನಿವಾಸಿಯಾಗಿದ್ದರು. ಇವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದರು. ಕಳೆದ ವಾರ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದರು.
ಕೂಡಲೇ ಆಕೆಯನ್ನು ತಪಾಸಣೆ ನಡೆಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ವೈದ್ಯರು ಗಾನವಿಗೌಡರ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದು ದೃಢಪಡಿಸಿದ್ದರು.
ಇದರಿಂದ ಆಕೆಯನ್ನು ಬದುಕುಳಿಸುವುದು ಕಷ್ಟ ಎಂದು ಕುಟುಂಬದ ಸದಸ್ಯರಲ್ಲಿ ತಿಳಿಸಿದ್ದಾರೆ. ಬಳಿಕ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮನೆಯವರ ಅನುಮತಿ ಮೇರೆಗೆ ವೈದ್ಯರು, ಹೃದಯ, ಕಿಡ್ನಿ, ಕಣ್ಣು, ಲಿವರ್ ಅನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಗಾನವಿಗೌಡ ಸಾವಿನಲ್ಲೂ ಇತರರ ಬಾಳಿಗೆ ಬೆಳಕಾಗಿದ್ದಾರೆ.