ಅಡಿಕೆ ಧಾರಣೆ ದಾಟುವುದೇ 350-400ರೂ ಗಡಿ??
ಮಂಗಳೂರು, ಜುಲೈ 4: ಭಾರತ-ನೇಪಾಳ ಸಂಬಂಧ ಹಳಸಿರುವ ಹಿನ್ನಲೆಯಲ್ಲಿ ನೇಪಾಳದಿಂದ ಭಾರತಕ್ಕೆ ಮುಂದಿನ ದಿನಗಳಲ್ಲಿ ಅಡಿಕೆ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ಉತ್ತರ ಭಾರತದಲ್ಲಿ ಅಡಿಕೆಗೆ ತೀವ್ರ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಮಂಗಳೂರಿನ ಚಾಲಿ ಅಡಿಕೆಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.
ಈಗಾಗಲೇ ಅಡಿಕೆ ಧಾರಣೆ, ಇಳುವರಿ ಕೊರತೆ, ಅಮದು ನಿರ್ಬಂಧದ ಹಿನ್ನಲೆಯಲ್ಲಿ 325 ರಿಂದ 345ರೂ ತನಕ ಏರಿಕೆ ಕಂಡಿದ್ದು, ಗಡಿವಿವಾದ ಇಳುವರಿ ಕೊರತೆಗಳಿಂದ ಇನ್ನೆರಡು ತಿಂಗಳಲ್ಲಿ ಮತ್ತಷ್ಟು ಏರಲಿದೆ ಎಂದು ಅಂದಾಜಿಸಲಾಗಿದೆ.

ಕೊರೊನಾ ಕಾರಣದಿಂದ ಅಡಿಕೆ ಸೇರಿದಂತೆ ಎಲ್ಲಾ ವಸ್ತುಗಳ ಅಮದು-ರಪ್ತು ಸ್ಥಗಿತಗೊಂಡಿದ್ದು, ಲಾಕ್ ಡೌನ್ ಗೆ ಮೊದಲು ವಿದೇಶಿ ಅಡಿಕೆ ಶ್ರೀಲಂಕಾ ಮೂಲಕ ಭಾರತ ಪ್ರವೇಶಿಸುತ್ತಿತ್ತು. ಭಾರತ-ನೇಪಾಳ ಮುಕ್ತ ವ್ಯಾಪಾರ ಒಪ್ಪಂದದನ್ವಯ ಕಳಪೆ ಅಡಿಕೆ ಭಾರತಕ್ಕೆ ಪೂರೈಕೆ ಆಗುತ್ತಿದ್ದು, ಇದೀಗ ಭಾರತ ಮತ್ತು ನೇಪಾಳ ಸಂಬಂಧ ಹದಗೆಟ್ಟ ಹಿನ್ನಲೆಯಲ್ಲಿ ನೇಪಾಳದ ಅಡಿಕೆ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಉತ್ತರ ಭಾರತದಲ್ಲಿ ಮಂಗಳೂರಿನ ಚಾಲಿ ಅಡಿಕೆಗೆ ಭಾರೀ ಬೇಡಿಕೆ ಇದ್ದು, ಅಡಿಕೆ ಧಾರಣೆ ಏರಿಕೆ ಕಂಡರೂ ಇಳುವರಿ ಕೊರತೆಯಿಂದಾಗಿ ನಿರೀಕ್ಷಿತ ಅಡಿಕೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕೇರಳ ಮತ್ತು ಕರ್ನಾಟಕದ ಇತರ ಭಾಗಗಳ ಅಡಿಕೆಯನ್ನು ಅವಲಂಬಿಸಬೇಕಾಗಿದೆ. ಇದು ಅಡಿಕೆ ಧಾರಣೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಲಿದೆ ಎಂದು ಹೇಳಲಾಗುತ್ತಿದ್ದು, ಇನ್ನೆರಡು ತಿಂಗಳಲ್ಲಿ 350 ರೂಪಾಯಿ ಗಡಿದಾಟಿ 400 ರೂಪಾಯಿ ಗೆ ಏರಿದರೂ ಅದರಲ್ಲಿ ಆಶ್ಚರ್ಯವಿಲ್ಲ ಎನ್ನುವುದು ಮಾರುಕಟ್ಟೆ ತಜ್ಞರ ಅಂಬೋಣ








