ಜಾಗತಿಕವಾಗಿ ಕಂಡುಬರುವ ಸಾಂಕ್ರಾಮಿಕ ಪಿಡುಗುಗಳು ಇಂದು ನಿನ್ನೆಯವಲ್ಲ. ಅನಾದಿಕಾಲದಿಂದಲೂ ಇವುಗಳ ಪ್ರಭಾವ ಪರಿಸರದ ಮೇಲಾಗುತ್ತಲೇ ಇದೆಯಾದರೂ, ಏರುತ್ತಿರುವ ಜಾಗತಿಕ ತಾಪಮಾನ, ಪರಿಸರ ಮಾಲಿನ್ಯದ ಇತ್ತೀಚಿನ ವರ್ಷಗಳಲ್ಲಿ ಇವುಗಳ ಪರಿಣಾಮ ಹೆಚ್ಚಾಗಿಯೇ ಕಂಡುಬರುತ್ತಿದೆ.1720ರಲ್ಲಿ ವಿಶ್ವವನ್ನು ತಲ್ಲಣಗೊಳಿಸಿದ ಮಹಾಮಾರಿ ಪ್ಲೇಗ್, 1820ರಲ್ಲಿ ಬಾಧಿಸಿದ ಕಾಲರಾ ಪಿಡುಗು, 1920ರಲ್ಲಿ ಬಲಿತೆಗೆದುಕೊಂಡ ಸ್ಪಾನಿಷ್ ಫ್ಲೂ,ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಬಾಧಿಸಿದ ಸಾರ್ಸ(SARS),ಮರ್ಸ(MERS),ಎಬೋಲಾ,ಗಳ ಸಾಲಿನಲ್ಲಿ ಈಗ 2020ರಲ್ಲಿ ಕ್ರೂರವಾಗಿ ತನ್ನ ಕರಾಳ ಹಸ್ತವನ್ನು ಚಾಚುತ್ತಿರುವ ಕೊರೊನಾ(ಕೋವಿಡ್-19) ಇವೆಲ್ಲವೂ ಸೂಕ್ಷ್ಮವಾದ ವೈರಸ್ ನಿಂದ ಹುಟ್ಟಿದ ದೈತ್ಯ ಪಿಡುಗುಗಳು ಎಂಬುದು ರುಜುವಾತಾಗಿದೆ.ಪರಿಸರ ಮಾಲಿನ್ಯದಿಂದಾಗಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪಗಳಿಂದ ಮನುಕುಲ ತತ್ತರಿಸುತ್ತಿರುವಾಗಲೇ ಕೊರೊನಾದಂತಹ ಮಾರಕ ಪಿಡುಗು ನಿಜಕ್ಕೂ ಜಗತ್ತನ್ನು ಬೆಚ್ಚಿ ಬೀಳಿಸುತ್ತಿದೆ.
ಏಷ್ಯಾಖಂಡದ ಮಧ್ಯ ಚೀನಾದ ಹುಬೈ ಪ್ರಾಂತದ ನಗರ ವೂಹಾನ್.ಇದು ಯಾಂಗತ್ಸೆ ನದಿ ದಡದ ಮೇಲಿದೆ. ಇಲ್ಲಿ 2019ರ ಡಿಸೆಂಬರ್ 31 ರ ಸುಮಾರಿಗೆ ಈ ಕೊರನಾ ಸೋಂಕಿನ ಅವತಾರವಾಯಿತು.ನಂತರ ಕೇವಲ ಎರಡು ಮೂರು ತಿಂಗಳುಗಳಲ್ಲಿ ಈ ವೈರಸ್ಸು ಜಗತ್ತಿನೆಲ್ಲೆಡೆ ಕ್ಷಿಪ್ರವಾಗಿ ಹರಡುತ್ತಿದೆ. ಜನರೇ ಇಲ್ಲದ ಅಂಟಾರ್ಕ್ಟಿಕಾ ಖಂಡವನ್ನು ಹೊರತುಪಡಿಸಿ ಜಗತ್ತಿನ ಎಲ್ಲ ಖಂಡಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿದ ಈ ಪಿಡುಗು ವಿಶ್ವದೆಲ್ಲೆಡೆ ಈ ತನಕ ಲಕ್ಷಕ್ಕೂ ಮೀರಿ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ ಕೋಟಿಗೂ ಮಿಕ್ಕಿ ಸೋಂಕಿತರು ಇದರ ಬಾಧೆಗೆ ಒಳಗಾಗುತ್ತಿದ್ದಾರೆ ದಿನೇ ದಿನೇ ಸೋಂಕಿತರ ಹಾಗು ಸಾವಿನ ಪ್ರಮಾಣ ಹೆಚ್ಚುತ್ತಲೇ ಇದೆ.
ಮುಂದುವರಿದ ರಾಷ್ಟ್ರಗಳಾದ ಅಮೆರಿಕಾ, ಇಟಲಿ, ಸ್ಪೇನ್, ಫ್ರಾನ್ಸ ಗಳನ್ನು ಬೆಚ್ಚಿಬೀಳಿಸುತ್ತಿರುವ ಈ ವೈರಸ್ ಮುಂದುವರಿಯುತ್ತಿರುವ ಹಾಗು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮಭಾರತವನ್ನು ಹೇಗೆ ಬಾಧಿಸೀತೆಂದು ಊಹಿಸುವುದು ಕಷ್ಟವಾಗಿದೆ.ಕೊರೊನಾ ಸೃಷ್ಟಿಸಿದ ಈ ಅನಾಹುತಕ್ಕೆ ಆರ್ಥಿಕತೆ ಕುಸಿಯುತ್ತಿದೆ, ಷೇರು ನೆಲಕಚ್ಚುತ್ತಿದೆ ಎಲ್ಲಕ್ಕಿಂತ ಹೆಚ್ಚಾಗಿ ಸಾವಿನ ಭಯ ಆವರಿಸಿದೆ.
“ಒಲೆಹೊತ್ತಿ ಉರಿದೊಡೆ ನಿಲಬಹುದಲ್ಲದೇ ಧರೆ ಹೊತ್ತಿ ಉರಿದೊಡೆ ನಿಲಬಹುದೇ?” ಎಂಬ ಜಗಜ್ಯೋತಿ ಬಸವಣ್ಣರ ಉಕ್ತಿಯಂತೆ, ಇಂದು ಅತಿ ಶೀಘ್ರದಲ್ಲಿ ಕೆಮ್ಮಿನಿಂದ, ಸೀನಿನಿಂದ, ಎಂಜಲಿನಿಂದ ಬರುವ ಹನಿಗಳಿಂದ(droplets)ಹರಡುತ್ತಿರುವ ಈ ಅಂಟು ಜಾಡ್ಯ ಧರೆಯನ್ನೇ ಹೊತ್ತಿ ಉರಿಸ ಹೊರಟಿದೆ. ಉದಾಹರಣೆಗೆ , ಒಂದು ಊರಿನಲ್ಲಿ ಒಬ್ಬನಿಗೇನೋ ತೊಂದರೆ ಆಯಿತೆಂದರೆ ಅದು ಅಂಥಹ ನಷ್ಟವಲ್ಲ ಆದರೆ ಊರಿಗೆ ಊರೇ ತೊಂದರೆಯಲ್ಲಿ ಸಿಲುಕಿದರೆ ಸಹಾಯಹಸ್ತ ಚಾಚುವರಾರು? ಎಂಬ ಪರಿಸ್ಥಿತಿ ಯನ್ನು ಇಂದು ನಾವು ಅನುಭವಿಸುತ್ತಿದ್ದೇವೆ.ಮಾರಕ ವೈರಸ್ಸಿಗೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು ಸವಾಲೆಂಬಂತೆ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಸದ್ಯದಲ್ಲಿ ಕಂಡು ಹಿಡಿಯಲೆಂಬ ಸದಾಶಯ ನಮ್ಮೆಲ್ಲರದು. ಆದರೆ ಅಲ್ಲಿಯವರೆಗೆ ಇದರ ಪಸರಿಸುವಿಕೆಯನ್ನು ನಮ್ಮಿಂದ ಆದಷ್ಟು ಮಟ್ಟಿಗೆ ತಡೆಯಲು ನಾವು ಕಂಕಣಬದ್ಧರಾಗಬೇಕಿದೆ. ಸರಕಾರಗಳು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಹತೋಟಿಗೆ ತರಲು ಪ್ರಯತ್ನಿಸುತ್ತಿವೆ ಆದರೆ ಇಲ್ಲಿ, ಸರ್ಕಾರ,ವಿಜ್ಞಾನಿಗಳು ಎಂಬುದಕ್ಕಿಂತ ಪ್ರತೀ ನಾಗರಿಕನೂ ತನ್ನ ಜವಾಬ್ಧಾರಿ,ಕರ್ತವ್ಯವನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇದೆ.
ಜಾಗತಿಕ ಪಿಡುಗು ಕೊರೊನ(ಕೋವಿಡ್-19) ಸೋಂಕು ಹರಡದಂತೆ ಮುನ್ನೆಚ್ಚರಿಕೆಯೊಂದೇ ಸದ್ಯಕ್ಕೆ ನಮ್ಮ ಮುಂದಿರುವ ದಾರಿ. ಎಲ್ಲರೂ ವೈಯಕ್ತಿಕ ನೈರ್ಮಲ್ಯದ ಕಡೆಗೆ ಗಮನ ಹರಿಸಬೇಕು..ಕೆಮ್ಮು ಸೀನು ಬಂದಾಗ ಜಾಗೃತೆ ಬೇಕು ಅಲ್ಲದೇ ಕರವಸ್ತ್ರದಿಂದ ಬಾಯಿ ಮುಚ್ಚಿಕೊಂಡು ಕೆಮ್ಮಬೇಕು, ಸೀನಬೇಕು. ಎಲ್ಲೆಂದರಲ್ಲಿ ಉಗುಳುವ ಪರಿಪಾಠ ಬಿಡಬೇಕು.ಆಗಾಗ ಕೈ ಸ್ವಚ್ಛಗೊಳಿಸುತ್ತಿರಬೇಕು.ಕೈಗಳಿಂದ ಮೂಗು ಕಿವಿ, ಕಣ್ಣುಗಳನ್ನು ಮುಟ್ಟುತ್ತಿರಬಾರದು. ಮನೆಯ ಆಹಾರವನ್ನೇ ತಿನ್ನುವುದು, ಅನವಶ್ಯಕ ತಿರುಗಾಟವನ್ನು ನಿಲ್ಲಿಸಬೇಕು.ಸಾಕಷ್ಟು ಪೌಷ್ಟಿಕ ಆಹಾರ ಸೇವಿಸಬೇಕು. ಈ ಎಲ್ಲ ವೈಯಕ್ತಿಕ ಕಾಳಜಿಯ ಜೊತೆಗೆ ಸಾಮಾಜಿಕ ಕಾಳಜಿಕೂಡ ಅತಿ ಮುಖ್ಯವಾಗಿದೆ. ನಾವು ಕೆಮ್ಮುವಾಗ, ಸೀನುವಾಗ ಇನ್ನೊಬ್ಬರಿಗೆ ತೊಂದರೆ ಆಗಬಾರದೆಂಬ ಸಾಮಾಜಿಕ ಕಳಕಳಿ ಬೇಕು. ನಮಗೆ ನಾವೇ ದಿಗ್ಬಂಧನ ಹಾಕಿಕೊಳ್ಳಬೇಕು. ಸರ್ಕಾರದ ಆದೇಶವನ್ನು ನಮ್ಮಜವಾಬ್ಧಾರಿ ಎಂದು ಪಾಲಿಸಬೇಕು.
ಇಂದು ‘ಕೊರೊನಾ’ ಹುಟ್ಟಿಸಿದ ಈ ಭಯವು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋದ ನಮ್ಮನ್ನು ಪುನಃ ನಮ್ಮ ಭಾರತೀಯ ಸಂಸ್ಕೃತಿಯ ಕಡೆಗೆ ಕೈಬೀಸಿ ಕರೆಯುತ್ತಿದೆ. ಕೈಕುಲುಕುವ ,ಆಲಂಗಿಸುವ, ಚುಂಬಿಸುವ ಬದಲು ಕೈಮುಗಿಯುವುದು, ಯೋಗ ಧ್ಯಾನ ,ಎಂಜಲಿನ ಮಡಿವಂತಿಗೆ ,ಆಹಾರ-ವಿಹಾರದ ಮಡಿವಂತಿಕೆ ಮುಂತಾದವುಗಳನ್ನು ಕಾರ್ಯರೂಪಗೊಳಿಸುತ್ತಿದೆ. ಹಾಗೆಯೇ ‘ಕೊರೊನಾ’ ನೈರ್ಮಲ್ಯದ, ಸ್ವದೇಶಿ ಸಂಸ್ಕೃತಿಯ ಅವಶ್ಯಕತೆಯ, ಹಾಗು “ಎಲ್ಲರೆಲ್ಲರಿಗಾಗಿ” ಎಂಬ ತತ್ವವನ್ನು ಜಾಗೃತಿಗೊಳಿಸುತ್ತಿದೆ. ಸ್ವಾರ್ಥದ ಅಮಲಿನಲ್ಲಿದ್ದ ನಮಗೆ “ಬಹುಜನ ಹಿತಾಯ, ಬಹುಜನ ಸುಖಾಯ” ಎಂಬುದನ್ನು ನೆನಪಿಸುತ್ತಿದೆ.ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ ದ್ವೇಷ ಮರೆತು “ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದನ್ನು ಸಾಬೀತು ಪಡಿಸಬೇಕಿದೆ. ಜಾತಿ, ಧರ್ಮ, ಬಡವ, ಬಲ್ಲಿದ ನೆಂಬ ಭೇದ ಮರೆತು ಸಾಮರಸ್ಯದಿಂದ “ಸರ್ವೇಜನಾಃ ಸುಖಿನೋ ಭವಂತು” ಎಂದು ನಾವು ನಂಬಿದ ದೇವರನ್ನು ಪ್ರಾರ್ಥಿಸಬೇಕಿದೆ. ಇದರ ಜೊತೆಯಲ್ಲಿ ಸದಾ ಈ ಪಿಡುಗಿನ ಸೋಂಕಿತರ ವೈದ್ಯಕೀಯ ಸೇವೆಯಲ್ಲಿತೊಡಗಿರುವ ವೈದ್ಯರು, ದಾದಿಯರಿಗೆ, ಜನತಾಕರ್ಫ್ಯೂ ವಿನಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ನಗರ ಶುಚಿಗೊಳಿಸುತ್ತಿರುವ ಪೌರ ಕಾರ್ಮಿಕರು, ,ಎಂತಹುದೇ ಪರಿಸ್ಥಿತಿಯಲ್ಲಿಯೂ ದೇಶವನ್ನು ಹಗಲಿರುಳೂ ಕಾಯುತ್ತಿರುವ ಯೋಧರಿಗೆ ಇವರೆಲ್ಲರಿಗೂ ನಮ್ಮ ಗೌರವ ಚಿರಸ್ಥಾಯಿಯಾಗಿರಬೇಕು. ಮಾರಕ ಪಿಡುಗುಗಳು ದೂರವಾಗಿ ನೆಮ್ಮದಿ ನೆಲೆಯಾಗಲಿ ಎಂಬ ಸದಾಶಯದೊಂದಿಗೆ….”ಲೋಕಾ ಸಮಸ್ತಾ ಸುಖಿನೋ ಭವಂತು”
🖋 ಶುಭಲಕ್ಷ್ಮಿ ಆರ್ ನಾಯಕ