ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪಾದರಾಯನಪುರ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ. ನಿನ್ನೆ ಪಾದರಾಯನಪುರದಲ್ಲಿ ನಡೆದ ಗಲಾಟೆ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಗಲಾಟೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಅವರ ಪೈಕಿ 100 ಜನರ ಗುರುತು ಪತ್ತೆ ಹಚ್ಚಿ, ಪಟ್ಟಿ ಸಿದ್ಧಪಡಿಸಿಕೊಂಡಿರೋ ಪೊಲೀಸರು ಆರೋಪಿಗಳನ್ನು ಬಂಧಿಸಲು ರಾತ್ರಿಯಿಂದಲೇ ತಯಾರಿ ನಡೆಯುತ್ತಿದ್ದಾರೆ. ಅದರಂತೆ ಸದ್ಯ 50 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಘಟನೆ ನಡೆಯುತ್ತಿದ್ದಂತೆ ಅಖಾಡಕ್ಕಿಳಿದ ಪೊಲೀಸರು ಮಿಡ್ ನೈಟ್ ಹಂಟಿಂಗ್ ಮಾಡಿ 50 ಜನರನ್ನ ಬಲೆಗೆ ಕೆಡವಿದ್ದಾರೆ. ಬ್ಯಾಟರಾಯನಪುರ ಇನ್ಸ್ ಪೆಕ್ಟರ್ ಲಿಂಗರಾಜು ಮತ್ತು ಚಾಮರಾಜಪೇಟೆ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗ್ತಿದೆ. ಆರಂಭದಲ್ಲಿ ಸೀಲ್ ಡೌನ್ ಜಾಗದಲ್ಲಿ ಬ್ಯಾರಿಕೇಡ್ ಮತ್ತು ಶೀಟ್ ಗಳನ್ನ ಕಿತ್ತೆಸಿದ್ದ ಆರೋಪದ ಮೇಲೆ ಓರ್ವ ಮಹಿಳೆ ಸೇರಿದಂತೆ ಹದಿಮೂರು ಜನರನ್ನ ವಶಕ್ಕೆ ಪಡೆಯಲಾಗಿತ್ತು. ಬಳಿಕ ರಾತ್ರಿಯಿಡೀ ಪೊಲೀಸರು ಪಾದರಾಯನಪುರದ ಗಲ್ಲಿ ಗಲ್ಲಿ ಹುಡುಕಿ ಗಲಾಟೆ ಮಾಡಿದವ್ರನ್ನ ಪತ್ತೆ ಮಾಡಿ, ಒಟ್ಟು 50 ಮಂದಿಯನ್ನ ಬಂಧಿಸಿದ್ದಾರೆ. ಸದ್ಯ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದ್ರ ಮುಖರ್ಜಿ ಮತ್ತು ಡಿಸಿಪಿ ರಮೇಶ್ ಬಾನೋತ್ ಸ್ಟೇಷನ್ ನಲ್ಲೇ ಉಳಿದಿದ್ದಾರೆ. ತಲೆಮರೆಸಿಕೊಂಡವರ ಪತ್ತೆ ಕಾರ್ಯ ಮುಂದುವರೆದಿದೆ.