ಅಭಿನಯ ಚಕ್ರವರ್ತಿ, ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಫ್ಯಾಂಟಮ್. ಈ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿ ಅನೇಕ ದಿನಗಳೇ ಆಗಿತ್ತು. ಆದರೆ ಸಿನಿಮಾ ಚಿತ್ರೀಕರಣ ಯಾವಾಗ ಪ್ರಾರಂಭವಾಗಿತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ ಇವತ್ತಿನಿಂದ ಚಿತ್ರೀಕರಣ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಹಾಗೆ ಚಿತ್ರದ ಬಗ್ಗೆ ಅಪ್ ಡೇಟ್ ನೀಡುತ್ತಾ, ಕಿಚ್ಚನ ಒಂದು ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ಸುದೀಪ್ ಗನ್ ಹಿಡಿದು ಖಡಕ್ ಲುಕ್ ನಲ್ಲಿ ಪೋಸ್ ನೀಡಿದ್ದಾರೆ.
ಇನ್ನು ‘ಫ್ಯಾಂಟಮ್’ ಮೊದಲ ಶೆಡ್ಯೂಲ್ ಹೈದರಾಬಾದ್ ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೆ ಕಿಚ್ಚ ಅಂಡ್ ಟೀಂ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದು ಮೊದಲ ದಿನದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿ ಮತ್ತೆ ಬೆಂಗಳೂರಿನಲ್ಲಿ ಎರಡನೆ ಹಂತದ ಚಿತ್ರೀಕರಣ ಮಾಡಲಿದೆ.








