ಸಹಕಾರಿ ಬ್ಯಾಂಕುಗಳನ್ನು ಆರ್ ಬಿ ಐ ವ್ಯಾಪ್ತಿಗೆ ಒಳಪಡಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಒಪ್ಪಿಗೆ
ಹೊಸದಿಲ್ಲಿ, ಜೂನ್ 27: ದೇಶದಲ್ಲಿರುವ ಎಲ್ಲಾ ಸಹಕಾರಿ ಬ್ಯಾಂಕುಗಳನ್ನು ಆರ್ ಬಿ ಐ ವ್ಯಾಪ್ತಿಗೆ ಒಳಪಡಿಸುವ ಸುಗ್ರೀವಾಜ್ಞೆಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಗ್ರಾಹಕರ ಹಿತದೃಷ್ಟಿಯ ಉದ್ದೇಶದಿಂದ ಬ್ಯಾಂಕಿಂಗ್ ನಿಯಂತ್ರಣ ತಿದ್ದುಪಡಿ ಮಸೂದೆ – 2020 ಯನ್ನು ಈ ಬಾರಿ ಬಜೆಟ್ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ಸೋಂಕಿನ ಹಿನ್ನಲೆಯಲ್ಲಿ ಅಧಿವೇಶನವನ್ನು ಮುಂದೂಡಿದ್ದರಿಂದ ಮಸೂದೆ ಪಾಸ್ ಆಗಿರಲಿಲ್ಲ. ಹೀಗಾಗಿ ಸಹಕಾರಿ ಬ್ಯಾಂಕುಗಳ ಗ್ರಾಹಕರ ಹಿತ ದೃಷ್ಟಿಯಿಂದ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.
ಇದೀಗ ರಾಷ್ಟ್ರಪತಿಗಳು ಈ ಮಸೂದೆಗೆ ಸಹಿ ಹಾಕಿದ್ದು, ದೇಶದಲ್ಲಿನ 1,540 ಸಹಕಾರಿ ಬ್ಯಾಂಕುಗಳು ಆರ್ ಬಿಐ ವ್ಯಾಪ್ತಿಗೆ ಒಳಪಡಲಿವೆ. ಸಹಕಾರಿ ಬ್ಯಾಂಕುಗಳಲ್ಲಿ ಸುಮಾರು 8.6 ಕೋಟಿಗೂ ಹೆಚ್ಚು ಠೇವಣಿದಾರರಿದ್ದು, ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಠೇವಣಿದಾರರ ಹಣ ಸುರಕ್ಷಿತವಾಗಿರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.