ಐದು ದಿನಗಳ ಪ್ರವಾಸ ಮುಗಿಸಿ ಸ್ವದೇಶಕ್ಕೆ ಬಂದ ಪ್ರಧಾನಿ
ನವದೆಹಲಿ : ಇಟಲಿ, ಬ್ರಿಟನ್ ರಾಷ್ಟ್ರಗಳಿಗೆ 5 ದಿನಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತಕ್ಕೆ ಆಗಮಿಸಿದ್ದಾರೆ.
ಪ್ರಧಾನಿಗಳು ತಮ್ಮ ಈ ಐದು ದಿನಗಳ ಭೇಟಿಯಲ್ಲಿ ರೋಮ್ ನಲ್ಲಿ 16ನೇ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಂಡು, ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಆರ್ಥಿಕತೆ, ಆರೋಗ್ಯ, ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಹವಾಮಾನ ಬದಲಾವಣೆ ವಲಯದಲ್ಲಿ ಸೂಕ್ತ ಕ್ರಮಗಳು ಜಾರಿಯಾಗಬೇಕು ಎಂದು ಪ್ರಬಲ ಸಂದೇಶ ರವಾನಿಸಿದ್ದಾರೆ.
ಜಾಗತಿಕ ಸಮುದಾಯಕ್ಕಾಗಿ 5 ಶತಕೋಟಿ ಕೋವಿಡ್ ಲಸಿಕೆಯನ್ನು ಮುಂದಿನ ವರ್ಷದ ವೇಳೆಗೆ ಭಾರತ ಉತ್ಪಾದಿಸಲಿದೆ.
ಇದಕ್ಕಾಗಿ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳುವುದು ಎಂದು ಪ್ರಧಾನಿಗಳು ತಿಳಿಸಿದರು.
ಮಂಗಳವಾರ ಗ್ಲಾಸ್ಕೋದಲ್ಲಿ ನಾವಿನ್ಯತೆಯ ಶುದ್ಧ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸುವ ಕುರಿತ ಅಧಿವೇಶನದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ ಜಗತ್ತಿನಾದ್ಯಂತ ಯಾವುದೇ ಪ್ರದೇಶದ ಸೌರ ಇಂಧನ ಧಾರಣಾ ಸಾಮಥ್ರ್ಯವನ್ನು ಅಳೆಯುವ ಸೌರಶಕ್ತಿ ಕ್ಯಾಲ್ಕ್ಯುಲೇಟರ್ ಅಪ್ಲಿಕೇಶನ್ ಅನ್ನು ಶೀಘ್ರದಲ್ಲೇ ಜಗತ್ತಿಗೆ ಒದಗಿಸಲಿದೆ.
ಉಪಗ್ರಹ ಮೂಲಕ ಜಗತ್ತಿನ ಯಾವುದೇ ಭಾಗದಲ್ಲಿ ಲಭ್ಯವಿರುವ ಸೌರ ಇಂಧನ ಸಾಮಥ್ರ್ಯವನ್ನು ಅಳೆಯುವ ವ್ಯವಸ್ಥೆ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದರು.