ಬೆಂಗಳೂರು: ಕೊರೋನಾ ಭೀತಿ ಗೊಂದಲ, ನೂಕುನುಗ್ಗಲು ನಡುವೆಯೇ ರಾಜ್ಯಾದ್ಯಂತ ಇಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಭಾಷಾ ಪರೀಕ್ಷೆ ನಡೆಯಿತು. ರಾಜ್ಯಾದ್ಯಂತ 1016 ಕೇಂದ್ರಗಳಲ್ಲಿ 5.95 ಲಕ್ಷ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆದಿದ್ದಾರೆ.
ಪರೀಕ್ಷೆ ಆರಂಭಕ್ಕೂ ಮುನ್ನ ಪರೀಕ್ಷಾ ಕೇಂದ್ರಗಳ ಮುಂದೆ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡದೇ ಗುಂಪು ಗುಂಪಾಗಿ ಸೇರಿದ್ದಲ್ಲದೆ, ನೊಂದಣಿ ಸಂಖ್ಯೆ ಹಾಗೂ ಕೊಠಡಿ ಸಂಖ್ಯೆ ಹುಡುಕಲು ಮುಗಿಬಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಪರೀಕ್ಷೆ 10ಗಂಟೆ 15 ನಿಮಿಷಕ್ಕೆ ಆರಂಭವಾಗಬೇಕಿತ್ತಾದರೂ ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8 ಗಂಟೆಗೆ ಬಂದಿದ್ದ ವಿದ್ಯಾರ್ಥಿಗಳು ರೋಲ್ ನಂಬರ್ ಪರಿಶೀಲನೆಗಾಗಿ ಪರದಾಡಿದರು. ಇನ್ನೂ ಕೆಲವು ಕಡೆ, ವಿದ್ಯಾರ್ಥಿಗಳು ಗುಂಪು ಗುಂಪಾಗಿ ಕುಳಿತು ಕೊನೆಯ ಕ್ಷಣದ ವಿಷಯದ ಸಮಾಲೋಚನೆಯಲ್ಲಿ ತೊಡಗಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವಂತೆ ಆದೇಶ ನೀಡಲಾಗಿತ್ತು. ಆದರೆ, ಕೆಲವು ಕಡೆ ಮಾಸ್ಕ್ ಧರಿಸದೇ ಬಂದಿದ್ದು, ಸರ್ಕಾರದ ಕಡೆಯಿಂದ ಮಾಸ್ಕ್ ವಿತರಿಸಿದರೆ, ಕೆಲವು ಕಡೆ ಮಾಸ್ಕ್ ಇಲ್ಲದ ಕಾರಣ ಪೊಲೀಸರು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಿಂದ ಕಳಿಸಿದ ಪ್ರಕರಣಗಳೂ ನಡೆದಿವೆ.
ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಿದ ನಂತರವೇ ಪರೀಕ್ಷಾ ಕೇಂದ್ರದೊಳಕ್ಕೆ ಬಿಡಲಾಯಿತು. ಈ ವೇಳೆಯೂ ಸಾಮಾಜಿಕ ಅಂತರ ಕಾಪಾಡದೇ ನೂಕುನುಗ್ಗಲು ನಡೆಯಿತು.
ಸಾಮಾಜಿಕ ಅಂತರ ಕಾಪಾಡಿಕೊಂಡು ನೂಗುನುಗ್ಗಲು ಆಗದಂತೆ ಕ್ರಮಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆ ಭರವಸೆ ನೀಡಿದ್ದರೂ ಇಂದು ಯಾವುದೇ ಲಕ್ಷಣಗಳು ಕಂಡು ಬರಲೇ ಇಲ್ಲ.
ಮೈಸೂರಿನ ಪರೀಕ್ಷಾ ಕೇಂದ್ರಗಳಲ್ಲಿ ಅಧ್ವಾನ
ಹೌದು, ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ವ್ಯವಸ್ಥೆ ಸಂಪೂರ್ಣ ಅದ್ವಾನಗೊಂಡಿತ್ತು.
ಗುಂಪು ಗುಂಪಾಗಿ ನೂಕುನುಗ್ಗಲು ಮೂಲಕ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಮಾಡಿದ್ದನ್ನು ಕಂಡ ಪೋಷರು, ಕಾಲೇಜಿನ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.
ಮಕ್ಕಳ ಆರೋಗ್ಯಕ್ಕೆ ಏನೂ ಕ್ರಮ ಕೈಗೊಂಡಿದ್ದೀರಿ, ಸರಿಯಾದ ಮಾರ್ಗದರ್ಶನ ನೀಡಿಲ್ಲ, ಯಾವುದೇ ಅಗತ್ಯ ಕ್ರಮ ಇಲ್ಲ ಎಂದು ಮಹಾರಾಣಿ ಕಾಲೇಜು ಪ್ರಾಂಶುಪಾಲ ಸೋಮಣ್ಣ ಅವರನ್ನು ಪೋಷಕರು ತರಾಟೆಗೆ ತೆಗೆದುಕೊಂಡರು.
ಇನ್ನು ಮಂಗಳೂರು, ಶಿವಮೊಗ್ಗ, ಬಳ್ಳಾರಿ ಕಲಬುರಗಿ, ಯಾದಗಿರಿ ಸೇರಿದಂತೆ ಹಲವು ಕಡೆ ಪರೀಕ್ಷೆಗೂ ಮುನ್ನ ಸಾಮಾಜಿಕ ಅಂತರ ಗೊಂದಲ, ನೂಕುನುಗ್ಗಲು ಸಾಮಾನ್ಯವಾಗಿತ್ತು.








