ಅಯೋಧ್ಯೆ : ಇಂದು ಶುಭ ಗಳಿಗೆಯಲ್ಲಿ ಕೋಟ್ಯಾನುಕೋಟಿ ಜನರ ಆಶಯ, ನಂಬಿಕೆ, ಕನಸಿನಂತೆ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತಿದೆ. ಭರತ ಖಂಡದ ಐತಿಹಾಸಿಕ, ಪೌರಾಣಿಕ ಸ್ಮಾರಕದ ಪುನರ್ ನಿರ್ಮಾಣಕ್ಕೆ ಪ್ರಧಾನಿಗಳು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಅಯೋಧ್ಯೆ ಸಕಲ ರೀತಿಯಲ್ಲಿಯೂ ಸಜ್ಜಾಗಿದೆ.
ಭಾರತೀಯರ ಆತ್ಮಗೌರವದ ಪ್ರಶ್ನೆಯಾದ ರಾಮ ಮಂದಿರವನ್ನು ಭೂಕಂಪ ಸಂಭವಿಸಿದರೂ ದೇವಾಲಯಕ್ಕೆ ಯಾವುದೇ ಹಾನಿ ಆಗದೇ ಇರುವ ಅತ್ಯುನ್ನತ ಮತ್ತು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗುತ್ತದೆ.
ರಿಕ್ಟರ್ ಮಾಪಕದಲ್ಲಿ 10ರಷ್ಟು ತೀವ್ರತೆ ದಾಖಲಾದರೂ ದೇವಾಲಯಕ್ಕೆ ಹಾನಿಯಾಗದಂತೆ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ. ಮಂದಿರ ನಿರ್ಮಾಣ ಸ್ಥಳದಲ್ಲಿ 200 ಅಡಿ ಅಗೆದು ಭೂಸಾರ ಪರೀಕ್ಷೆ ಮಾಡಲಾಗಿದೆ. ಸಾವಿರ ವರ್ಷವಾದರೂ ನಾಶವಾಗದ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.








