ಧಾರವಾಡ : ಅಹಿಂಸೆಯನ್ನು ಲೆಕ್ಕಿಸದೇ ಸ್ವಾರ್ಥದ ಬೇಡಿಕೆಗಳ ಈಡೇರಿಕೆಯಲ್ಲಿ ಹುಟ್ಟಿಕೊಳ್ಳುವ ವೈರುಧ್ಯಗಳ ಸಂಕೀರ್ಣತೆ, ಸೇಡು, ಹಿಂಸಾಚಾರ, ಸಂಘರ್ಷದ ಅಪರಾಧಿಕೃತ್ಯಗಳ ವ್ಯಷ್ಟಿಯ ಕ್ರೋಧಾಗ್ನಿಯ ಶಮನಕ್ಕೆ ಉತ್ತಮ ಕ್ಷಮಾ ಧರ್ಮ ಬೆಳಕು ಚೆಲ್ಲುತ್ತದೆ ಎಂದು ಕನ್ನಡದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಪ್ರತಿಪಾದಿಸಿದರು.
ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಜಿನಮಂದಿರದ ಆವರಣದಲ್ಲಿ ಶ್ರೀನೇಮಿನಾಥ ದಿಗಂಬರ ಜೈನ್ ಟ್ರಸ್ಟ್ ಹಾಗೂ ತ್ರಿಶಲಾಮಾತಾ ಮಹಿಳಾ ಮಂಡಳದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿರುವ 10 ದಿನಗಳ ‘ದಶಲಕ್ಷಣ ಮಹಾಪರ್ವ’ವನ್ನು ರವಿವಾರ ಉದ್ಘಾಟಿಸಿ, ‘ಉತ್ತಮ ಕ್ಷಮಾ ಧರ್ಮ’ ಕುರಿತು ಮಾತನಾಡುತ್ತಿದ್ದರು.
ಅಶಾಂತಿ ಮತ್ತು ಆಧ್ಯಾತ್ಮಿಕ ತಲ್ಲಣಗಳಿಗೆ ಕಾರಣವಾಗುವ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ನಿವಾರಿಸುವ, ಪಶ್ಚಾತ್ತಾಪದ ಅಭಿವ್ಯಕ್ತಿಗೆ ಕಾರಣವಾಗುವ ಉತ್ತಮ ಕ್ಷಮಾ ಧರ್ಮದ ಸರ್ವೋಚ್ಚ ಕ್ಷಮೆಯು ಆಧ್ಯಾತ್ಮಿಕ ಔನ್ನತ್ಯ ಸಾಧನೆಯ ಜೊತೆಗೆ ಶ್ರಾವಕ-ಶ್ರಾವಕಿಯರ ಜೀವನ ವಿಧಾನವು ಸುಖ, ಶಾಂತಿ, ಸಾಮರಸ್ಯ, ಸಂತೃಪ್ತಿ, ಸಮೃದ್ಧಿಯಿಂದ ನಳನಳಿಸುವಂತೆ ಮಾಡುತ್ತದೆ ಎಂದರು.
ಆತ್ಮಸಂಗಾತ : ಮನುಷ್ಯನ ಶರೀರಕ್ಕೆ ಜೀವಂತಿಕೆಯನ್ನು ತುಂಬುವ ನಿರಾಕಾರ ಚೈತನ್ಯ ಶಕ್ತಿಯಾಗಿರುವ ಆತ್ಮವು ತನಗೆ ಅಂಟಿದ ಕರ್ಮ ಬಂಧನದ ಮನೋವಿಕಾರಗಳಿಂದ ಹೊರಬಂದಾಗಲೇ ಅದು ಬಯಲ ಬೆಳಗನ್ನು ಗಳಿಸಲು ಸಾಧ್ಯವಾಗುತ್ತದೆ. ಆಗ ವೀತರಾಗ ಸ್ಥಿತಿಯಲ್ಲಿ ಜಿನೇಶ್ವರನೊಂದಿಗೆ ನಡೆಸುವ ಭಕ್ತಿಯ ಅನುಸಂಧಾನದ ಆತ್ಮಸಂಗಾತಕ್ಕೆ ತೆರೆದುಕೊಳ್ಳಲು ಉತ್ತಮ ಕ್ಷಮಾ ಧರ್ಮವು ಸಾಧನಾ ಪಥವನ್ನು ತೆರದಿಡುತ್ತದೆ ಎಂದೂ ಯರಗಂಬಳಿಮಠ ಹೇಳಿದರು.
ಅಮ್ಮಿನಬಾವಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಸ್. ಪತ್ರಾವಳಿ ಅಧ್ಯಕ್ಷತೆವಹಿಸಿದ್ದರು. ತ್ರಿಶಲಾಮಾತಾ ಮಹಿಳಾ ಮಂಡಳದ ಅಧ್ಯಕ್ಷೆ ಶಶಿಕಲಾ ದೇಸಾಯಿ, ಶ್ರೀನೇಮಿನಾಥ ದಿಗಂಬರ ಜೈನ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ, ಪಾಶ್ವನಾಥ ದೇಸಾಯಿ, ಬಾಹುಬಲಿ ದೇಸಾಯಿ ಹಾಗೂ ಮಹಾವೀರ ಬಳಿಗೇರ ಅತಿಥಿಗಳಾಗಿದ್ದರು. ಪಮ್ಮಣ್ಣ ಧಾರವಾಡ, ಶ್ರೇಯಾಂಶ ದೇಸಾಯಿ, ಚಂದ್ರಕಾಂತ ನವಲೂರ, ದೀಪಕ ದೇಸಾಯಿ, ಈಶ್ವರ ಗಡೇಕಾರ, ಬ್ರಹ್ಮಕುಮಾರ ದೇಸಾಯಿ, ಪದ್ಮರಾಜ ಪತ್ರಾವಳಿ, ಸಮ್ಮೇದ ಲೋಕೂರ, ಮಂಜುನಾಥ ಬೊಬ್ಬಕ್ಕನವರ, ಭೀಮಶಿ ಜಗಾಪೂರ, ಲಕ್ಷ್ಮಿಸೇನ ನವಲೂರ ಇತರರು ‘ಣಮೋಕಾರ ಮಂತ್ರ’ದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಶಂಕರ ರಾಘೂನವರ ಸ್ವಾಗತಿಸಿದರು. ತವನಪ್ಪ ಲೋಕೂರ ನಿರೂಪಿಸಿದರು. ಮಹಾವೀರ ಅಣ್ಣಿಗೇರಿ ವಂದಿಸಿದರು. ಸಾವಿತ್ರಿ ದೇಸಾಯಿ ಜಿನಭಕ್ತಿಗೀತೆ ಪ್ರಸ್ತುತಪಡಿಸಿದರು.








