ರಾಜವೈದ್ಯೆ ಪವಿತ್ರ ತುಳಸಿಗಿದೆ ಪ್ರಾಚೀನ ಆಯುರ್ವೇದ ಪದ್ಧತಿಯಲ್ಲಿ ರಾಜಗೌರವ:
“ನಮಃ ತುಳಸಿ ಕಲ್ಯಾಣಿ, ನಮೋ ವಿಷ್ಣು ಪ್ರಿಯೇ ಶುಭೇ
ನಮೋ ಮೋಕ್ಷ ಪ್ರದಾಯಿನ್ಯೇ ನಮಃ ಸಂಪತ್ ಪ್ರದಾಯಿಕೇ”
ಅಂದರೇ ಸಕಲ ಕಲ್ಯಾಣ ಕಾರ್ಯಗಳಿಗೆ ಮಂಗಳ ಸ್ವರೂಪಿಣಿಯಾಗಿರುವ ವಿಷ್ಣುಪ್ರಿಯ ತುಳಸಿ ಮಾತೆಯೇ, ಶುಭಸೂಚಕ ಹಾಗೂ ಮೋಕ್ಷವನ್ನು ಕರುಣಿಸಬಲ್ಲ ಸಂಪತ್ತನ್ನು ಕರುಣಿಸುವ ದೇವಿಯಾದ ತುಳಸಿಯೇ ನಿನಗೆ ನಮಿಸುತ್ತೇವೆ.
ಈ ಸಂಸ್ಕೃತ ಶ್ಲೋಕವನ್ನು ಪಠಿಸಿ ತುಳಸಿಗೆ ನಿತ್ಯವಂದಿಸುವ ಪರಿಪಾಠ ಹಿಂದೂ ಧರ್ಮದಲ್ಲಿದೆ.
ತುಳಸಿಯನ್ನು ನಮ್ಮ ಧಾರ್ಮಿಕ ನಂಬಿಕೆಯ ಪ್ರಕಾರ ವಿಷ್ಣುಪ್ರಿಯೆ ಹಾಗೂ ಲಕ್ಷ್ಮಿಯ ಅವತಾರ ಎನ್ನಲಾಗುತ್ತದೆ. ನಿತ್ಯ ತುಳಸಿ ಪೂಜೆ ಮಾಡುವುದರಿಂದ ನಮ್ಮೊಳಗೆ ಧನಾತ್ಮಕ ಚಿಂತನೆ ಮೈಗೂಡುತ್ತದೆ. ನಮ್ಮ ಮನೆಗಳಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಗೃಹ ಪರಿಸರದಲ್ಲಿ ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ಮನೆಮಾಡುತ್ತದೆ ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕ್ರಮ. ತುಳಸಿ ಗಿಡವಿದ್ದಲ್ಲಿ ಮಾಟ ಮಾರಣದಂತಹ ಕ್ಷುದ್ರವಿದ್ಯೆಗಳು ಫಲಕೊಡುವುದಿಲ್ಲ ಎನ್ನುವ ನಂಬಿಕೆಯೂ ನಮ್ಮಲ್ಲಿದೆ. ಋಣಾತ್ಮಕ ಶಕ್ತಿಗಳ ಚಿಂತನೆಗಳ ಉಚ್ಛಾಟನೆ ಮತ್ತು ಧನಾತ್ಮಕ ಚಿಂತನೆಗಳ ವೃದ್ಧಿಗೆ ತುಳಸಿ ಕಾರಣವಾಗುತ್ತದೆ ಎನ್ನುವುದರಿಂದಲೇ ಸಮಸ್ತ ಕೋಟಿ ಸಸ್ಯ ಸಂಕುಲಗಳಲ್ಲೇ ತುಳಸಿಯನ್ನು ಸರ್ವಶ್ರೇಷ್ಟ ಎಂದು ಭಾವಿಸಲಾಗುತ್ತದೆ.
ತುಳಸಿಗೆ ದೇವರ ಪೂಜೆಯಲ್ಲಿ ಮಾತ್ರವಲ್ಲದೇ ಆಯುರ್ವೇದದಲ್ಲೂ ಅತ್ಯಂತ ಪ್ರಮುಖ ಸ್ಥಾನವಿದೆ. ಈ ತುಳಸಿಯಲ್ಲೂ ನಾಲ್ಕು ಬಗೆಗಳಿವೆ. ಅವುಗಳೆಂದರೆ ರಾಮ ತುಳಸಿ, ಕೃಷ್ಣತುಳಸಿ, ವನತುಳಸಿ ಮತ್ತು ಕರ್ಪೂರ ತುಳಸಿ. ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಇದರಲ್ಲಿರುವ ಅತ್ಯಪೂರ್ವವಾದ ಔಷಧಿಯ ಗುಣಗಳು. ತುಳಸೀ ಚಹಾ ಇಂದು ನಿನ್ನೆ ಕಂಡುಹಿಡಿದಿದ್ದಲ್ಲ. ತುಳಸಿಯನ್ನು ತುಂಬಾ ಹಿಂದಿನಿಂದ ಬಳಸಿಕೊಂಡು ಅತ್ಯುತ್ತಮ ಔಷಧೀಯ ಗುಣದ ಆಹ್ಲಾದಕಾರಿ ಚಹಾ ತಯಾರಿಸುವ ಪದ್ಧತಿ ನಮ್ಮಲ್ಲಿತ್ತು.
ಕರ್ಪೂರ ತುಳಸಿಯ ಎಣ್ಣೆಯನ್ನು ತೆಗೆದು ಅದರಿಂದ ಕೀಟಾಣುಗಳನ್ನು ಹೊಡೆದೋಡಿಸುವಂತಹ ಉತ್ಪನ್ನವನ್ನು ತಯಾರಿಸುತ್ತಾರೆ. ಉಸಿರಾಟದ ಸಮಸ್ಯೆಗಳ ನಿವಾರಣೆಗೆ ರಾಮ ತುಳಸಿ ಪರಿಣಾಮಕಾರಿಯಾಗಿ ಬಳಸಲ್ಪಡುತ್ತದೆ. ರಾಮ ತುಳಸಿಯ ರಸವು ಶೀತ, ಕಫದ ಸಮಸ್ಯೆಯಿಂದ ಮುಕ್ತಿ ದೊರಕಿಸಿಕೊಡುತ್ತದೆ. ಹಾಗೆಯೇ ತುಳಸಿಯ ಎಣ್ಣೆಯನ್ನು ಕಿವಿನೋವಿನ ಸಮಸ್ಯೆಯ ಪರಿಹಾರಕ್ಕೂ ಬಳಸುತ್ತಾರೆ. ಇದರಿಂದ ಮಲೇರಿಯಾವನ್ನೂ ಸಹ ಗುಣಪಡಿಸಬಹುದು. ಅಜೀರ್ಣ, ತಲೆನೋವು, ಹಿಸ್ಟೀರಿಯಾ, ನಿದ್ರಾಹೀನತೆ ಮತ್ತು ಕಾಲರಾ ರೋಗಗಳಿಗೂ ತುಳಸಿ ರಾಮಬಾಣ. ಹೀಗಾಗಿ ಈ ತುಳಸಿಯ ತಾಜಾ ಎಲೆಗಳನ್ನು ನಿತ್ಯವೂ ಲಕ್ಷಾಂತರ ಜನರು ಸೇವಿಸುತ್ತಾರೆ. ತುಳಸಿಯ ಕಾಂಡದಿಂದ ಮಾಡಿದ ಮಣಿಗಳನ್ನೂ ಸಹ ಸರವಾಗಿ ಬಳಸುತ್ತಾರೆ. ತುಳಸಿ ಅತ್ಯಂತ ಪವಿತ್ರ ಎಂಬುದೇ ಇದಕ್ಕೆ ಕಾರಣ.
ಈ ತುಳಸಿಯ ವೈಜ್ಞಾನಿಕ ಹೆಸರು ಒಸಿಮಮ್ ಬೆಸಿಲಿಕಂ. ಇಂಗ್ಲೀಷ್ ನಲ್ಲಿ ಇದಕ್ಕೆ ಬ್ಯಾಸಿಲ್ ಎಂದು ಕರೆಯುತ್ತಾರೆ. ಆಯುರ್ವೇದೀಯ ಗಿಡಮೂಲಿಕೆಯಾಗಿ ಮಾತ್ರವಲ್ಲ, ಇಟಾಲಿಯನ್ ಹಾಗೂ ತೈವಾನ್ ನಂತಹ ಈಶಾನ್ಯ ಏಷಿಯಾ ಭಾಗದ ಪಾಕಶಾಸ್ತ್ರದಲ್ಲಿ ತುಳಸಿ ಅತ್ಯಂತ ಪ್ರಮುಖವಾಗಿ ಬಳಸಲ್ಪಡುವ ಒಂದು ಪದಾರ್ಥ. ವಿಶೇಷವೆಂದರೆ ತುಳಸಿಯ ಜಾತಿಗೆ ಅನುಗುಣವಾಗಿ ಅದರ ಪರಿಮಳವೂ ಸಹ ಬದಲಾಗುತ್ತದೆ. ತುಳಸಿ ಸಸ್ಯಕ್ಕೆ ತಂಪಿನ ವಾತಾವರಣ ಅಗತ್ಯವಿದ್ದಷ್ಟೇ ಉಷ್ಣ ವಾತಾವರಣದ ಅಗತ್ಯವೂ ಸಹ ಇದೆ. ಇದಕ್ಕೆ ನಿಯಮಿತವಾಗಿ ನೀರಿನ ಸಿಂಪಡನೆ ಬೇಕೇಬೇಕು.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು