ಆಯುರ್ವೇದ ಶಾಸ್ತ್ರದಲ್ಲಿ ಬಹುಮೂಲ್ಯ ಔಷದೀಯ ಸಸ್ಯ; ಹಲವು ರೋಗಗಳಿಗೆ ಒಂದೇ ಮದ್ದು ಸಮುದ್ರಫಲ
ಸಮುದ್ರ ಫಲದ ವೈಜ್ಞಾನಿಕ ಹೆಸರು ಬ್ಯಾರಿಂಗ್ಟುನ್ ರೆಸಿಮೊಸ. ಇದನ್ನು ತಮಿಳಿನಲ್ಲಿ ಸಮುದ್ರಪುಲ್ಲಾನಿ ಎಂದೂ ತೆಲುಗು ಭಾಷೆಯಲ್ಲಿ ಕನಪ ಚೆಟ್ಟು ಎಂತಲೂ, ಸಂಸ್ಕೃತದಲ್ಲಿ ಸಮುದ್ರಫಲ ಹಾಗೂ ಹಿಂದಿಯಲ್ಲಿ ನಿವರ್ ಹುಟ್ಟು, ಎನ್ನುವ ಹೆಸರುಗಳಿಂದ ಕರೆಯಲಾಗುತ್ತದೆ. ಇದರ ಸಣ್ಣ ಗಾತ್ರದ ಮರವು 10 ಮೀಟರ್ ಎತ್ತರ ಬೆಳೆಯುತ್ತದೆ. ತಿಳಿಗೆಂಪು ಬಣ್ಣದ ಹೂಗಳನ್ನು, ಹಸಿರು ಮತ್ತು ನೇರಳೆ ಬಣ್ಣದ ಕಾಯಿಗಳನ್ನು ಹೊಂದಿರುವ ಇದು ಅತ್ಯುತ್ತಮ ಔಷದೀಯ ಸಸ್ಯ.
ಸಮುದ್ರಫಲದ ಬೇರು ತಂಪು ಗುಣವನ್ನು ಹೊಂದಿದ್ದು, ಮಲಬದ್ದತೆಯನ್ನು ಗುಣ ಮಾಡುತ್ತದೆ. ಇದರ ಬೀಜವನ್ನು ಒಣಗಿಸಿ ಪುಡಿ ಮಾಡಿ ಸೇವಿಸುವುದರಿಂದ ಮೂಲವ್ಯಾಧಿಗೂ ಹಾಗೂ ಪಿತ್ತದೋಷದಂತಹ ಕಾಯಿಲೆಗಳು ವಾಸಿಯಾಗುತ್ತದೆ. ಸಮುದ್ರಫಲದ ಕಾಯಿಯನ್ನು ಒಣಗಿಸಿ ಪುಡಿಮಾಡಿ ನಂಜು ನಿವಾರಣೆಗೂ ಬಳಸಬಹುದು. ಸಮುದ್ರಫಲದ ಕಾಯಿಯನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ನಶ್ಯದಂತೆ ಆಗಾಗ ಸೇವಿಸುತ್ತಿದ್ದರೆ ಕಟ್ಟಿಕೊಂಡ ಮೂಗಿನ ಶೀತ ಕರಗುತ್ತದೆ.
ಸಮುದ್ರಫಲದ ತೊಗಟೆಯನ್ನು ಸಂಧಿವಾತದ ನೋವುಗಳಿಗೆ ದಿವ್ಯ ಔಷದವನ್ನಾಗಿ ಬಳಸಬಹುದು. ಇದರ ತೊಗಟೆಯನ್ನು ತೇದಿ ಲೇಪಿಸುವುದರಿಂದ ಮತ್ತು ನಿರಂತರವಾಗಿ ತೊಗಟೆಯನ್ನು ಕಾಯಿಸಿ ಕಷಾಯ ಮಾಡಿ ಸೇವಿಸುವುದರಿಂದ ನೋವು ಶಮನವಾಗುವುದು. ಚರ್ಮದ ತುರಿಕೆ, ಹುಳುಕಡ್ಡಿ. ಸಿಡುಬು ಮುಂತಾದ ಚರ್ಮದ ಸಮಸ್ಯೆಗಳಿಗೆ ಸಮುದ್ರಫಲ ಮರದ ಎಲೆ ಅಥವಾ ಬೇರು ಅಥವಾ ತೊಗಟೆಯನ್ನು ಅರೆದು ಗಂಧವನ್ನು ಲೇಪಿಸಿದರೇ ಗುಣವಾಗುತ್ತದೆ.
ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು








