
ಮುಂಬೈ, ಮೇ 19 : ಕೊರೋನಾ ಸೋಂಕು ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ. ಮಹಾರಾಷ್ಟ್ರದಲ್ಲಿ 30,000ಕ್ಕೂ ಅಧಿಕ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 20,000 ಕ್ಕೂ ಹೆಚ್ಚಿನ ಪ್ರಕರಣ ಮುಂಬೈನಲ್ಲೇ ವರದಿಯಾಗಿದೆ. ಏಷ್ಯಾದ ಅತಿದೊಡ್ಡ ಕೊಳೆಗೇರಿ ಮುಂಬಯಿಯ ಧಾರವಿ ಒಂದರಲ್ಲೇ ಇಲ್ಲಿಯವರೆಗೆ 56 ಸಾವುಗಳು ಸೇರಿದಂತೆ ಒಟ್ಟು 1327 ಪ್ರಕರಣಗಳು ದಾಖಲಾಗಿವೆ.
ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಮತ್ತು ರಾಜ್ಯ ಆಡಳಿತವು ಆರೋಗ್ಯ ಕಾರ್ಯಕರ್ತರು ಪ್ರತಿದಿನ 16 ಗಂಟೆಗಳಿಗಿಂತ ಹೆಚ್ಚಿನ ಸಮಯ ಸೇವೆ ನಿರ್ವಹಿಸಬೇಕಾದ ಕಾರಣ ಅವರ ಸಂಖ್ಯೆಯನ್ನು ಹೆಚ್ಚಿಸಿದೆ. ಕೊರೋನಾ ತಡೆಗೆ ಬಹಳಷ್ಟು ಪ್ರಯತ್ನಿಸುತ್ತಿರುವ ಸರ್ಕಾರ ಗುತ್ತಿಗೆ ಆಧಾರದ ಮೇಲೆ ದಾದಿಯರನ್ನು, ಬಿಎಂಸಿಗೆ ಅಟೆಂಡೆಂಟ್ ಸಿಬ್ಬಂದಿಯನ್ನು ನೇಮಿಸಿದೆ. ಆಡಳಿತಾತ್ಮಕ ಉದ್ದೇಶಗಳಿಗಾಗಿ ವಿಂಗಡಿಸಲಾದ 24 ವಾರ್ಡ್‌ಗಳಲ್ಲಿ 93 ನೇ ಸ್ಥಾನದಲ್ಲಿರುವ ಧಾರವಿ (ಜಿ-ನಾರ್ತ್ ವಾರ್ಡ್), ‘ರೆಡ್’ ಎಂದು ಗುರುತಿಸಲಾದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರೋಗ್ಯ ಅಧಿಕಾರಿಗಳು, ಆನ್-ಫೀಲ್ಡ್ ವೈದ್ಯಕೀಯ ಸಿಬ್ಬಂದಿಗಳಿಗೆ ಮತ್ತು ಧಾರವಿಯಲ್ಲಿ ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವ ಸಹಾಯಕ ಸಿಬ್ಬಂದಿಗಳಿಗೆ ಈ ಪ್ರದೇಶ ದೊಡ್ಡ ಸವಾಲನ್ನು ಒಡ್ಡಿದೆ. ಧಾರವಿ ಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುವ ಬಹಳಷ್ಟು ಅಂಶಗಳಿವೆ.
ಮುಂಬೈ ವಿಮಾನ ನಿಲ್ದಾಣ ಬಳಿಯ ಧಾರವಿ ಏಷ್ಯಾದ ಅತಿದೊಡ್ಡ ಕೊಳೆಗೇರಿಯಾಗಿದೆ. 5 ಚದರ ಕಿ.ಮೀ ವಿಸ್ತಾರದ ಈ ಕೊಳೆಗೇರಿ ಪ್ರದೇಶದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಬಹಳಷ್ಟು ಜನರು ತುಂಬಿರುವ ಇಕ್ಕಟ್ಟಾದ ಗುಡಿಸಲುಗಳನ್ನು, ಸುತ್ತಲೂ ಕೊಳಕುಗಳಿಂದ ಅವರಿಸಿರುವ ಪ್ರದೇಶಗಳನ್ನು ಧಾರವಿ ಹೊಂದಿದೆ. ಇಲ್ಲಿನ ಶೇ. 70 ರಷ್ಟು ನಿವಾಸಿಗಳು ಸಮುದಾಯ ಶೌಚಾಲಯಗಳನ್ನೇ ಬಳಸುತ್ತಾರೆ. ಒಂದು ಸಣ್ಣ ಕೋಣೆಯಲ್ಲಿ ಐದು ಆರಕ್ಕೂ ಹೆಚ್ಚು ಜನರು ದಿನ ದೂಡುತ್ತಾರೆ. ಧಾರವಿಯಲ್ಲಿ ಪ್ರಕರಣಗಳು ವೇಗವಾಗಿ ಏರುತ್ತಿರುವ ಕಾರಣ ಇಲ್ಲಿ ರೋಗ ಲಕ್ಷಣಗಳನ್ನು ಹೊಂದಿರುವವರ ಪರೀಕ್ಷೆಯನ್ನಷ್ಟೇ ನಡೆಸಲಾಗುತ್ತಿದೆ. ಅಲ್ಲದೇ ಕೊರೋನಾ ಸೋಂಕಿನ ಜಾಡನ್ನು ಕಂಡುಹಿಡಿಯುವುದು ಇಲ್ಲಿ ಅಸಾಧ್ಯವಾಗಿ ಪರಿಣಮಿಸಿದೆ.
ಆರೋಗ್ಯವಂತ ವ್ಯಕ್ತಿ ಉಪಯೋಗಿಸುವ ಶೌಚಾಲಯಗಳನ್ನು ಕೊರೊನಾ ಪೀಡಿತ ವ್ಯಕ್ತಿಯೂ ಬಳಸುವ ಕಾರಣ, ಸಣ್ಣ ವಾಸಿಸುವ ಸ್ಥಳಗಳನ್ನು ಅನೇಕರು ಹಂಚಿಕೊಳ್ಳುವ ಕಾರಣ ಇಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಕಂಡಿದೆ.
ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡುತ್ತಿದ್ದರೂ ಇಲ್ಲಿ ಪ್ರತಿ ದಿನ ಕೊರೊನಾ ಪ್ರಕರಣಗಳು ಏರುತ್ತಲೇ ಇದೆ. 14 ದಿನಗಳ ಆಸ್ಪತ್ರೆಯ ಕ್ವಾರಂಟೈನ್ ನಂತರ ತಮ್ಮ ಸ್ಲಮ್ ಗೆ ಮರಳುವ ಜನರು ಮತ್ತೆ ಅದೇ ಮೊದಲಿನ ಜೀವನ ಪದ್ಧತಿಗೆ ಮರಳುತ್ತಾರೆ. ಅವರ ಜೀವನ ಪದ್ಧತಿ ಬದಲಾಗದಿದ್ದರೆ, ಯಾವುದೇ ಪ್ರಮಾಣದ ಪರೀಕ್ಷೆ, ತಪಾಸಣೆ, ಚಿಕಿತ್ಸೆಯು ವ್ಯತ್ಯಾಸವನ್ನುಂಟುಮಾಡುವುದಿಲ್ಲ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ನೈರ್ಮಲ್ಯ ಕಾಪಾಡಿಕೊಳ್ಳುವುದು ಕೂಡ ಕೊರೊನಾ ತಡೆಗಟ್ಟಲು ಅತ್ಯಗತ್ಯ. ಒಂದು ಸಣ್ಣ ವಾಸಿಸುವ ಸ್ಥಳದಲ್ಲಿ ಅನೇಕರು ವಾಸಿಸುವ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಇಲ್ಲಿ ಕಷ್ಟ ಸಾಧ್ಯ.
ಆರೋಗ್ಯ ಕಾರ್ಯಕರ್ತರು ಕೊರೊನಾ ಸಂಪರ್ಕದ ವ್ಯಕ್ತಿಗಳನ್ನು ಭೇಟಿ ಮಾಡಿದಾಗ ಮತ್ತು ಅವರಿಂದ ಮಾಹಿತಿಯನ್ನು ಸಂಗ್ರಹಿಸುವಾಗ , ಕ್ವಾರಂಟೈನ್ ನಿಂದ ಬಚಾವಾಗಲು ಸುಳ್ಳು ಹೇಳುತ್ತಾರೆ.ಅಷ್ಟೇ ಅಲ್ಲ ಎಷ್ಟೋ ಬಾರಿ ಸಂಪರ್ಕಿತರ ವಿಳಾಸಗಳಿಗೆ ಭೇಟಿ ಕೊಟ್ಟಾಗ ಅವರು ಆ ವಿಳಾಸದಲ್ಲಿ ದೊರಕುವುದಿಲ್ಲ.
ಧಾರವಿ ಕೊಳೆಗೇರಿಯಲ್ಲಿ ವಿವಿಧ ಧಾರ್ಮಿಕ ದೃಷ್ಟಿಕೋನಗಳ ಜನರಿದ್ದಾರೆ. ಅವರು ಕೊರೊನಾ ಸೋಂಕಿನ ಅಪಾಯಗಳ ಬಗ್ಗೆ ಇನ್ನೂ ತಿಳಿದಿಲ್ಲ ಮತ್ತು ಇತರರನ್ನು ಅನಗತ್ಯವಾಗಿ ಕೊರೋನಾದ ಬಗ್ಗೆ ಋಣಾತ್ಮಕ ವಾಗಿ ಪ್ರಚೋದಿಸುತ್ತಿದ್ದಾರೆ
ಧಾರವಿಯಲ್ಲಿ ಹೇಗೆ ಮತ್ತು ಏಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ ಮತ್ತು ಆರೋಗ್ಯ ಅಧಿಕಾರಿಗಳು ಕೊರೊನಾ ಪ್ರಕರಣಗಳನ್ನು ತಡೆಗಟ್ಟಲು ಎದುರಿಸುತ್ತಿರುವ ಹರಸಾಹಸದ ಬಗ್ಗೆ ಒಂದು ನೋಟವನ್ನು ಚೆಲ್ಲಿದ್ದೇವೆ.








