ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಗದ್ದಲ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಎಚ್.ಸಿ ಮಹದೇವಪ್ಪ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮ್ಮದೇ ಶೈಲಿಯಲ್ಲಿ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ. ಮಹದೇವಪ್ಪ ಅವರು ಈಗ ನಮ್ಮ ಹೈಕಮಾಂಡ್ ಭಾಗವಾಗಿದ್ದಾರೆ, ಅವರು ಬಹಳ ದೊಡ್ಡವರು ಎಂದು ವ್ಯಂಗ್ಯವಾಗಿಯೇ ಹೇಳಿರುವ ಡಿಕೆಶಿ, ಅಧಿಕಾರ ಹಂಚಿಕೆಯ ಅಸಲಿ ವಿಚಾರವನ್ನು ಸ್ವತಃ ಮುಖ್ಯಮಂತ್ರಿಗಳೇ ಸಮಯ ಬಂದಾಗ ಬಹಿರಂಗಪಡಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿ ರಸ್ತೆಯ ರಾಜ್ಯ ಚುನಾವಣಾ ಆಯೋಗದ ಕಚೇರಿ ಬಳಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಅವರು, ಪ್ರಸ್ತುತ ರಾಜಕೀಯ ವಿದ್ಯಮಾನಗಳು, ಶಾಸಕರ ಪ್ರವಾಸ ಹಾಗೂ ಬಿಜೆಪಿ ನಾಯಕರ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು.
ಮಹದೇವಪ್ಪ ಬಗ್ಗೆ ನಾನೇನು ಹೇಳಲ್ಲ
ಸಚಿವ ಮಹದೇವಪ್ಪ ಅವರು ಪೂರ್ಣಾವಧಿಗೆ ಸಿದ್ದರಾಮಯ್ಯನವರೇ ಸಿಎಂ ಎಂದು ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಸಚಿವ ಎಚ್.ಸಿ ಮಹದೇವಪ್ಪ ಬಹಳ ದೊಡ್ಡವರು. ಈಗ ಅವರು ಕೂಡ ನಮ್ಮ ಹೈಕಮಾಂಡ್ ಭಾಗವಾಗಿದ್ದಾರೆ. ಹೀಗಾಗಿ ಅವರ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಈ ವಿಚಾರದ ಬಗ್ಗೆ ಪಕ್ಷವೇ ತೀರ್ಮಾನ ಮಾಡಲಿ. ನಾಯಕರ ಹೇಳಿಕೆಗಳ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಅಧಿಕಾರ ಹಂಚಿಕೆ ಕದ್ದುಮುಚ್ಚಿ ಮಾಡಿದ ವ್ಯವಹಾರವಲ್ಲ
ನಾನು ಯಾರಿಗೂ ಉತ್ತರ ನೀಡಲು ತಯಾರಿಲ್ಲ. ನಾಯಕತ್ವದ ವಿಚಾರವಾಗಿ ಈ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ನಾನು, ಸಿದ್ದರಾಮಯ್ಯನವರು ಹಾಗೂ ಹೈಕಮಾಂಡ್ ಎಲ್ಲರೂ ಸೇರಿ ಒಂದು ತೀರ್ಮಾನ ತೆಗೆದುಕೊಂಡಿದ್ದೇವೆ. ಆ ತೀರ್ಮಾನ ಏನೆಂಬುದು ಸಮಯ ಬಂದಾಗ ತಿಳಿಯುತ್ತದೆ. ಇದೇನು ಕದ್ದುಮುಚ್ಚಿ ಮಾಡಿಕೊಂಡಿರುವ ಗುಟ್ಟು ವ್ಯವಹಾರವಲ್ಲ. ಸಿದ್ದರಾಮಯ್ಯ ಅವರೇ ಸೂಕ್ತ ಸಮಯ ಬಂದಾಗ ರಾಜ್ಯದ ಜನತೆಗೆ ಸಂದೇಶ ನೀಡಲಿದ್ದಾರೆ ಎಂದು ಕುತೂಹಲ ಮೂಡಿಸಿದರು.
ಶಾಸಕರ ವಿದೇಶ ಪ್ರವಾಸದ ಬಗ್ಗೆ ನನಗೇನೂ ಗೊತ್ತಿಲ್ಲ
ಇದೇ ವೇಳೆ ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವ ಪ್ರವಾಸದ ಬಗ್ಗೆಯೂ ಮಾಹಿತಿ ಇಲ್ಲ. ಮಾಧ್ಯಮಗಳಿಂದಷ್ಟೇ ಈ ವಿಷಯ ತಿಳಿದಿದೆ. ಅದು ಅವರ ವೈಯಕ್ತಿಕ ಪ್ರವಾಸವೋ ಅಥವಾ ಬೇರೆಯವರು ಅವರನ್ನು ಕಳುಹಿಸುತ್ತಿದ್ದಾರೋ ಎಂಬುದು ಗೊತ್ತಿಲ್ಲ. ಕಳುಹಿಸುವವರು ಉಂಟು, ಹೋಗುವವರು ಉಂಟು. ಪಕ್ಷದ ಅಧ್ಯಕ್ಷನಾಗಿ ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಾಣಾಕ್ಯ ವಿವಿಗೆ ನೂರಾರು ಎಕರೆ ಕೊಟ್ಟಿದ್ದು ಬಿಜೆಪಿಯವರಲ್ಲವೇ?
ಕಾಂಗ್ರೆಸ್ ಭವನಗಳ ನಿರ್ಮಾಣಕ್ಕೆ ಸರ್ಕಾರಿ ಜಮೀನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಡಿ.ಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಹೌದು, ನಾವು ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಾಗ ಬಳಸಿಕೊಳ್ಳುತ್ತಿದ್ದೇವೆ. ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಬೆಳಗಾವಿ ಅಧಿವೇಶನ ನಡೆಸಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 100 ಕಾಂಗ್ರೆಸ್ ಭವನಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಕಾನೂನು ಬದ್ಧವಾಗಿಯೇ 5 ರಿಂದ 10 ಸಾವಿರ ಚದರ ಅಡಿ ಜಾಗ ಮಂಜೂರು ಮಾಡುತ್ತಿದ್ದೇವೆ ಎಂದರು.
ಬಿಜೆಪಿಯವರ ಹಗರಣಗಳನ್ನು ಕೆದಕಿದ ಡಿಕೆಶಿ
ಬಿಜೆಪಿಯವರು ನಮಗೆ ಪಾಠ ಮಾಡುವುದು ಬೇಡ. ಅವರ ಆಡಳಿತ ಅವಧಿಯಲ್ಲಿ ಬೆಂಗಳೂರಿನಲ್ಲಿ ನೂರಾರು ಕಡೆ ವಿವಿಧ ಟ್ರಸ್ಟ್‌ಗಳ ಹೆಸರಿನಲ್ಲಿ ಜಾಗ ಪಡೆದಿಲ್ಲವೇ? ಚಾಣಾಕ್ಯ ವಿಶ್ವವಿದ್ಯಾಲಯಕ್ಕೆ ಎಕರೆಗೆ 10 ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ಕೇವಲ 50 ಲಕ್ಷ ರೂಪಾಯಿಗೆ ನೀಡಿದರು. ಒಟ್ಟು 100 ಎಕರೆ ಜಾಗ ಮಂಜೂರು ಮಾಡಿ, ಸಿಎಸ್‌ಆರ್ ನಿಧಿ ಮೂಲಕ ಕೋಟ್ಯಂತರ ಹಣ ಸಂಗ್ರಹಿಸಿದರು. ಇದು ಅಧಿಕಾರ ದುರುಪಯೋಗವಲ್ಲವೇ? ಜಾಗ ಮಂಜೂರು ಮಾಡದೆಯೇ ಆರ್.ಎಸ್.ಎಸ್ ಕಚೇರಿಗಳು ಹೇಗೆ ತಲೆ ಎತ್ತಿದವು? ಸದಾಶಿವನಗರದಲ್ಲಿ ಪಾರ್ಕ್ ಜಾಗವನ್ನು ಯೋಗ ಕೇಂದ್ರಕ್ಕೆ ನೀಡಿದ್ದು ಯಾರು? ಎಂದು ಪ್ರಶ್ನೆಗಳ ಸುರಿಮಳೆಗೈದರು.
ಅವರು ಬೇಕಿದ್ದರೆ ಕೋರ್ಟ್ ಮೆಟ್ಟಿಲೇರಲಿ
ಬಿಜೆಪಿಯವರು ಯಾವ ಆರೋಪವನ್ನಾದರೂ ಮಾಡಿಕೊಳ್ಳಲಿ. ನಾವು ನಮ್ಮ ಪಕ್ಷದ ದೇವಾಲಯವನ್ನು ಕಟ್ಟಲು ತೀರ್ಮಾನ ಮಾಡಿದ್ದೇವೆ. ಇದು ನಮ್ಮ ಕರ್ತವ್ಯ ಮತ್ತು ಇದನ್ನು ನಾವು ಮಾಡಿಯೇ ತೀರುತ್ತೇವೆ. ಎಲ್ಲಾ ನಿಯಮಗಳನ್ನು ಪಾಲಿಸಿಯೇ ಜಾಗ ಮಂಜೂರು ಮಾಡುತ್ತಿದ್ದೇವೆ. ಈ ಬಗ್ಗೆ ಯಾರಾದರೂ ನ್ಯಾಯಾಲಯದ ಮೆಟ್ಟಿಲೇರುವುದಾದರೆ ಸಂತೋಷವಾಗಿ ಹೋಗಲಿ ಎಂದು ಸವಾಲು ಹಾಕಿದರು.








