ಫೆಬ್ರವರಿ 7.. ರೋಸ್ ಡೇ..! ಅಂದ್ರೆ ಗುಲಾಬಿ ದಿನ..!
ಇದು ಫೆಬ್ರವರಿ 14ರ ವ್ಯಾಲೆಂಟೈನ್ಸ್ ಡೇಗೆ ಮುನ್ನಡಿಯಾಗಿ ಸೌಂದರ್ಯದ ಪ್ರತೀಕ ಗುಲಾಬಿ ಹೂ ನೀಡಿ ಪ್ರೀತಿಯನ್ನು ವ್ಯಕ್ತಪಡಿಸುವ ದಿನ ಅಂತ ಹೇಳಲಾಗುತ್ತಿದೆ. ಪ್ರೀತಿ, ಸಂಸ್ಕೃತಿ, ಅದೆಷ್ಟೋ ಇತಿಹಾಸದ ಘಟನೆಗಳಿಗೆ ಸಾಕ್ಷಿಯಾದ ದಿನದಂತೆ 2026ರ ಫೆಬ್ರವರಿ 7 ಕೂಡ ಮತ್ತೊಂದು ಐತಿಹಾಸಿಕ ಘಟನೆಗೂ ಸಾಕ್ಷಿಯಾಗಲಿದೆ.
ಹೌದು, 2026ರ ಫೆಬ್ರವರಿ 7, ರೋಸ್ ಡೇ ದಿನದಂದೇ ಟಿ-20 ವಿಶ್ವಕಪ್ ಟೂರ್ನಿಗೆ ಮುಹೂರ್ತ ನಿಗದಿಯಾಗಿದೆ. ಬಹುತೇಕ ಗೋಧೂಳಿ ಸಮಯದಲ್ಲಿ ಟೀಮ್ ಇಂಡಿಯಾ ಪ್ರತಿಷ್ಠಿತ ಟೂರ್ನಿಯ ಅಭಿಯಾನವನ್ನು ಶುರು ಮಾಡಲಿದೆ. ಗುಲಾಬಿ ದಿನದಂದು ದೊಡ್ಡಣ್ಣ ಅಮೆರಿಕಾ ವಿರುದ್ಧವೇ ಭಾರತದ ನೀಲಿ ಹುಡುಗರು ಮೊದಲ ಪಂದ್ಯವನ್ನು ಆಡಲಿದ್ದಾರೆ.
ಅಂದ ಹಾಗೇ, ಚಂಚಲ ಚೆಲುವೆಯಾಗಿರುವ ವಿಶ್ವಕಪ್ ಟ್ರೋಫಿ ಎಂಬ ಮಾಯಾಂಗನೆಯ ಪ್ರೀತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಟೀಮ್ ಇಂಡಿಯಾ ರೋಸ್ ಡೇಯಂದೇ ಕಣಕ್ಕಿಳಿಯುತ್ತಿರುವುದು ವಿಶೇಷವೇ ಸರಿ.
ಹಾಗೇ ನೋಡಿದ್ರೆ ಟೀಮ್ ಇಂಡಿಯಾ ಕಟುಮಸ್ತಾಗಿದೆ. ಅಷ್ಟೇ ಅಲ್ಲ ಗುಲಾಬಿ ಹೂವಿನಂತೆ ಕಂಗೊಳಿಸುವ ಅಂದಚೆಂದದ ತಂಡ. ಕಣ್ಣಿಗೆ ಸುಂದರವಾಗಿ ಕಾಣುವ ಗುಲಾಬಿ ಹೂವಿನ ಗಿಡದಲ್ಲಿ ಮುಳ್ಳುಗಳಿದ್ದಂತೆ ಟೀಮ್ ಇಂಡಿಯಾದಲ್ಲೂ ಸಮಸ್ಯೆಗಳು ಎಂಬ ಮುಳ್ಳುಗಳಿವೆ. ಅದು ಕೇವಲ ತಂಡದೊಳಗೆ ಮಾತ್ರವಲ್ಲ. ತಂಡದ ಹೊರಗಡೆಯೂ ಇದೆ. ಗುಲಾಬಿ ಹೂವನ್ನು ಎಚ್ಚರಿಕೆಯಿಂದ ಕೀಳುವ ಹಾಗೇ ಟೀಮ್ ಇಂಡಿಯಾದ ಆಯ್ಕೆಯನ್ನೂ ಮಾಡಬೇಕಿದೆ. ಆದ್ರೆ ಅದಕ್ಕೆ ಈಗ ಸಮಯ ಇಲ್ಲ. ಮುಳ್ಳು ಚುಚ್ಚಿದ್ರೂ ಸಹಿಸಿಕೊಳ್ಳುವ ಹಾಗೇ ಎಲ್ಲವನ್ನೂ ಸಹಿಸಿಕೊಂಡೇ ಟೀಮ್ ಇಂಡಿಯಾದ ಆಯ್ಕೆ ಪ್ರಕ್ರಿಯೆ ಡಿಸೆಂಬರ್ 20ರಂದು ನಡೆಯಲಿದೆ.
ಯಾಕಂದ್ರೆ ಪ್ರತಿಷ್ಠಿತ ಟೂರ್ನಿಗೆ ಮುನ್ನವೇ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಗೊಂದಲಗಳಿವೆ. (2007ರ ಕೆರೆಬಿಯನ್ ವಿಶ್ವಕಪ್ ವೇಳೆ ಇಂತಹುದ್ದೇ ಪರಿಸ್ಥಿತಿ ಟೀಮ್ ಇಂಡಿಯಾದಲ್ಲೂ ಇತ್ತು) ಹೆಡ್ ಕೋಚ್‍ನಿಂದ ಹಿಡಿದು ತಂಡದ ಆಟಗಾರರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ. ಎಲ್ಲರೂ ಆಕ್ರಮಣಕಾರಿ ಪ್ರವೃತ್ತಿಯವರೇ. ಒಬ್ಬರಿಗೂ ತಾಳ್ಮೆಯೇ ಇಲ್ಲ. ಕೆಲವೊಮ್ಮೆ ಮದವೇರಿದ ಸಲಗದಂತೆ ವರ್ತಿಸುತ್ತಾರೆ. ಅದಕ್ಕೆ ತಕ್ಕಂತೆ ಕ್ರಿಕೆಟ್ ಪಂಡಿತರ ಟೀಕೆಗಳು. ಒಟ್ಟಾರೆಯಾಗಿ ಟಿ-20 ವಿಶ್ವಕಪ್ ಟೂರ್ನಿಗೆ ಮುನ್ನ ಟೀಮ್ ಇಂಡಿಯಾದ ಆತ್ಮಸ್ಥೈರ್ಯ ಕುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಂತ ಖಂಡಿತವಾಗಿಯೂ ಟೀಮ್ ಇಂಡಿಯಾದ ಸಾಮರ್ಥ್ಯದ ಬಗ್ಗೆ ಯಾವ ಅಪನಂಬಿಕೆಯೂ ಇಲ್ಲ. ಈ ವಿಚಾರದಲ್ಲಿ ಸ್ಕೈ ಗ್ಯಾಂಗ್ ಒಂಥರಾ ಡೇರ್ ಡೇವಿಲ್ಸ್.
ಆದ್ರೂ ನಾಯಕ ಸೂರ್ಯ ಕುಮಾರ್ ಯಾದವ್ ಮತ್ತು ಉಪನಾಯಕ ಶುಭ್ಮನ್ ಗಿಲ್ ಅವರ ಕಳಪೆ ಫಾರ್ಮ್ ಈ ಎಲ್ಲ ಗೊಂದಲಗಳಿಗೆ ಪ್ರಮುಖ ಕಾರಣವಾಗಿದೆ. ರನ್ ಬರ ಎದುರಿಸುತ್ತಿರುವ ಇವರಿಬ್ಬರೂ ಕೂಡ ಟೀಮ್ ಇಂಡಿಯಾದ ಪ್ರಮುಖ ಪಿಲ್ಲರ್ಸ್. ಒಂದು ಬಾರಿ ಲಯಕಂಡುಕೊಂಡ್ರೆ ಇವರಿಬ್ಬರನ್ನು ಕಟ್ಟಿಹಾಕೋದು ಕೂಡ ಕಷ್ಟವೇ. ಹಾಗಾಗಿ ಆಯ್ಕೆ ಸಮಿತಿ ಇವರಿಬ್ಬರನ್ನು ತಂಡದಿಂದ ಹೊರಗಿಡುವ ದುಸ್ಸಾಹಸಕ್ಕೆ ಕೈ ಹಾಕಲ್ಲ. ಅಷ್ಟೇ ಅಲ್ಲ, ಈಗ ತಂಡದಲ್ಲಿ ಬದಲಾವಣೆ ಮಾಡುವ ಸಮಯವೂ ಅಲ್ಲ. ಯಾಕಂದ್ರೆ ಟಿ-20 ವಿಶ್ವಕಪ್‍ಗೆ ಇನ್ನುಳಿದಿರುವುದು ಒಂದೂವರೆ ತಿಂಗಳು. ರೆಡಿಯಾಗೋಕೆ ಇರೋದು ಬರೀ ಐದು ಪಂದ್ಯ ಅಷ್ಟೇ.
ಇನ್ನು ನಾಯಕನಾಗಿ ಸೂರ್ಯಕುಮಾರ್ ಯಾದವ್ ಸಕ್ಸಸ್ ಆಗಿದ್ದಾರೆ. ಆದ್ರೆ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. 2025ರಲ್ಲಿ ಆಡಿರುವ 21 ಪಂದ್ಯಗಳಲ್ಲಿ ಗಳಿಸಿದ್ದು ಬರೀ 218 ರನ್. ಇದರಲ್ಲಿ ಶತಕವೂ ಇಲ್ಲ. ಅರ್ಧ ಶತಕವೂ ಇಲ್ಲ. ಗರಿಷ್ಠ ಅಂದ್ರೆ ಅಜೇಯ 47 ರನ್.
ಹಾಗೇ ಶುಭ್ಮನ್ ಗಿಲ್ ಕೂಡ. ಈ ವರ್ಷ ಆಡಿರುವ 15 ಪಂದ್ಯಗಳಲ್ಲಿ ಗಳಿಸಿದ್ದು 291 ರನ್. ಇವರದ್ದು ಕೂಡ ಶತಕವೂ ಇಲ್ಲ. ಅರ್ಧಶತಕವೂ ಇಲ್ಲ. ಗರಿಷ್ಠ ರನ್ 47 ಅಷ್ಟೇ..! ಅಂದ ಮೇಲೆ ಇವರಿಬ್ಬರ ಮೇಲೆ ವಕ್ರದೃಷ್ಟಿ ಬೀಳುವುದರಲ್ಲಿ ತಪ್ಪೇನಿಲ್ಲ ಬಿಡಿ. ಆದ್ರೂ ಇವರಿಬ್ಬರು ಬಿಗ್ ಮ್ಯಾಚ್ ದಾಂಡಿಗರು ಎಂಬುದು ಕೂಡ ಅಷ್ಟೇ ಸತ್ಯ.
ಒಟ್ಟಿನಲ್ಲಿ, ಡಿಸೆಂಬರ್ 20ರಂದು ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಅಚ್ಚರಿಯ ಹೆಸರುಗಳನ್ನು ಕಾಣಲು ಸಾಧ್ಯವಿಲ್ಲ. ತಂಡದೊಳಗೆ ಯಶಸ್ವಿ ಜೈಸ್ವಾಲ್ ಅಥವಾ ರಿಂಕ್ ಸಿಂಗ್ ಹೆಸರು ಬಂದ್ರೂ ಬರಬಹುದು. ಇನ್ನುಳಿದಂತೆ
ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ) ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಜಸ್ಪ್ರಿತ್ ಬೂಮ್ರಾ, ಆರ್ಶಾದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮನ್ಸ್.
ಕೊನೆಯದಾಗಿ, ಟಿ-20 ವಿಶ್ವಕಪ್‍ನ ಫೈನಲ್ ಮ್ಯಾಚ್ ಮಾರ್ಚ್ 8ರಂದು ನಡೆಯಲಿದೆ. ಅಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ರೋಸ್ ಡೇ ಗೂ ವುಮೆನ್ಸ್ ಡೇ ಗೂ ಹತ್ತಿರದ ಸಂಬಂಧವಿದೆ. ಪ್ರೀತಿಯಲ್ಲಿ ಬಿದ್ದ ಯಾವುದೇ ಹರೆಯದ ತರುಣನ ಭಾವಕೋಶದಲ್ಲಿ ಗುಲಾಬಿಯ ಅಸ್ತಿತ್ವಕ್ಕಂತೂ ಕುತ್ತಿಲ್ಲ. ತನ್ನ ಪ್ರಿಯತಮೆಯ ಕುರಿತಾದ ನವಿರಾದ ಪ್ರೇಮವೆಂಬ ಲಾಲಿತ್ಯ ಗುಲಾಬಿಯಷ್ಟೇ ಕೋಮಲ. ನೋಡಿ ಎಷ್ಟು ಸೊಗಸಾಗಿದೆ ಈ ಸಮೀಕರಣ ಗುಲಾಬಿಯ ದಿನದಂದು ಶುರುವಾಗುವ ವಿಶ್ವಕಪ್ ಚುಟುಕು ಕ್ರಿಕೆಟ್ ಅಭಿಯಾನ ಮಹಿಳಾ ದಿನದಂದು ಮುಕ್ತಾಯವಾಗುತ್ತದೆ. ಭಾರತ ಕ್ರಿಕೆಟ್ ತಂಡದ ನೀಲ ನಾಯಕರಿಗೆ ಪ್ರತಿ ಕ್ರಿಕೆಟ್ ವಿಶ್ವಕಪ್ ಎಂಬುದು ಅವರ ಮೊದಲ ಪ್ರೀತಿಯಷ್ಟೇ ಭಾವಯಾನ. ವಿಶ್ವಕಪ್ ಕ್ರಿಕೆಟ್ ಎಂಬ ಮಾಯಾಂಗನೆಗೆ ಗುಲಾಬಿಯ ಪಕಳೆಗಳ ಸುಮವೃಷ್ಟಿ ಸುರಿಸಲು ನಮ್ಮ ಹುಡುಗರು ತಯಾರಾಗಿದ್ದಾರೆ ಬಿಡಿ. ರೋಸ್ ಡೇ ದಿಂದ ಬರೆಯಲಾಗುವ ಮುನ್ನುಡಿ ವುಮೆನ್ಸ್ ಡೇನಂದು ಸಂಭ್ರಮದ ಉಪಸಂಹಾರಗೊಳ್ಳಲಿ ಎನ್ನುವುದು ನಮ್ಮಂತಹ ಕೋಟ್ಯಾನುಕೋಟಿ ಟೀಮ್ ಇಂಡಿಯಾ ಅಭಿಮಾನಿಗಳ ಹರಕೆ ಮತ್ತು ಹಾರೈಕೆ.
– ಸನತ್ ರೈ








