ಬೆಂಗಳೂರು: ತಂದೆಯ ಡಬಲ್ ಬ್ಯಾರೆಲ್ ಗನ್ ನಿಂದ ಶೂಟ್ ಮಾಡಿಕೊಂಡು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ರಿಶಿ ಉತ್ತಪ್ಪ (Rishi Uttappa) ಎಂದು ಗುರುತಿಸಲಾಗಿದ್ದು, ಈತ ಆರ್ ವಿ ಕಾಲೇಜಿನ ಮೊದಲ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಆತ್ಮಹತ್ಯೆಗೂ ಮುನ್ನ ತಾಯಿಗೆ ಕರೆ ಮಾಡಿದ್ದ ರಿಶಿ ಉತ್ತಪ್ಪ, ಸಾರಿ ಅಂತಾ ಹೇಳಿ ಕಾಲ್ ಕಟ್ ಮಾಡಿದ್ದ. ತಾಯಿ ಮನೆಗೆ ಆಗಮಿಸುವಷ್ಟರಲ್ಲಿ ಮಗ ಆತ್ಮಹತ್ಯೆಗೆ ಶರಣಾಗಿದ್ದ. ಈ ಕುಟುಂಬ ಮೂಲತಃ ಕೊಡಗಿನವರು ಎನ್ನಲಾಗಿದೆ.
ರಿಶಿ ತಂದೆ ರವಿ ತಿಮ್ಮಯ್ಯ ನೈಸ್ ಕಂಪನಿಯಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರಿಗೆ ಲೈಸೆನ್ಸ್ಡ್ ಡಬಲ್ ಬ್ಯಾರೆಲ್ ಗನ್ ನೀಡಲಾಗಿತ್ತು. ತಂದೆಯ ಡಬಲ್ ಬ್ಯಾರೆಲ್ ಗನ್ ನಿಂದ ರಿಶಿ ಉತ್ತಪ್ಪ ಎದೆಗೆ ಶೂಟ್ ಮಾಡಿಕೊಂಡಿದ್ದಾನೆ. ಸುಮಾರು 2 ಗಂಟೆ ರಕ್ತಸ್ರಾವವಾಗಿ ಆಸ್ಪತ್ರೆಗೆ ಸಾಗಿಸಿದ 10 ನಿಮಿಷಗಳಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತಂದೆ ಅಂಕಗಳನ್ನು ಹೆಚ್ಚು ತೆಗೆದುಕೊಳ್ಳುವಂತೆ ಬುದ್ಧಿವಾದ ಹೇಳಿದ್ದರು ಎನ್ನಲಾಗಿದ್ದು, ಇದ್ದಕ್ಕಿದ್ದಂತೆ ಶೂಟ್ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.








