ಮೃತಪಟ್ಟ ತಾಯಿಯ ಕಂಡು ಮಗನೂ ಹೃದಯಾಘಾತದಿಂದ ನಿಧನ
ಕುಂದಾಪುರ, ಜೂನ್ 14: ಮೃತಪಟ್ಟ ತಾಯಿಯನ್ನು ಕಂಡು ಮಗನು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆ ಸಮೀಪದ ಮಹಾರಾಜ್ ಜುವೆಲ್ಲರ್ಸ್ ಮಾಲಿಕ ದಿ. ರಮೇಶ್ ಶೇಟ್ ಅವರ ಪತ್ನಿ ಶಕುಂತಲಾ ಶೇಟ್ (80) ಅವರು ಶುಕ್ರವಾರ ತಮ್ಮ ಸ್ವಗೃಹದಲ್ಲಿ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ಒಂದು ಗಂಟೆಯ ಬಳಿಕ ಮಗ ಪ್ರಶಾಂತ್ ಶೇಟ್ (46) ತಾಯಿಯ ಅಗಲಿಕೆಯ ನೋವಿನಿಂದ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಶಕುಂತಲಾ ಶೇಟ್ ಅವರಿಗೆ 4 ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರಿದ್ದು, ಅವಿವಾಹಿತರಾಗಿದ್ದ ಪ್ರಶಾಂತ್ ಶೇಟ್ ಅವರು ಶಕುಂತಲಾ ಶೇಟ್ ಅವರ ಮೂರನೇ ಪುತ್ರ.
ಶನಿವಾರ ಕುಂದಾಪುರದ ಚಿಕ್ಕನ್ಸಾಲ್ ರಸ್ತೆಯಲ್ಲಿ ಇರುವ ಹಿಂದೂ ಸ್ಮಶಾನದಲ್ಲಿ ತಾಯಿ ಮತ್ತು ಮಗನ ಅಂತ್ಯ ಸಂಸ್ಕಾರ ಒಟ್ಟಿಗೆ ನಡೆಸಲಾಗಿದ್ದು, ಕುಂದಾಪುರದ ಜುವೆಲ್ಲರಿ ಅಂಗಡಿಗಳು ಮೃತರ ಗೌರವಾರ್ಥವಾಗಿ ಅಂಗಡಿ ಬಂದ್ ಮಾಡಿದ್ದರು.