ಮದಗಜ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ. ಭರಾಟೆ ಚಿತ್ರದ ನಂತರ ರೋರಿಂಗ್ ಸ್ಟಾರ್ ಶ್ರೀ ಮುರುಳಿ ನಟಿಸುತ್ತಿರುವ ಚಿತ್ರ ಇದಾಗಿರುವುದರಿಂದ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಚಿತ್ರದ ಮುಹೂರ್ತದ ವೇಳೆ ಶ್ರೀ ಮುರುಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಲ ವಿಷಯಗಳನ್ನು ಪ್ರಸ್ತಾಪಿಸಿದ್ದು, ಸಿನಿಮಾದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗುವಂತೆ ಮಾಡಿದೆ.
ಇನ್ನು ನಿರ್ದೇಶಕ ಮಹೇಶ್ ಕುಮಾರ್ ಕೂಡ ಚಿತ್ರದ ಮೇಲೆ ಸಾಕಷ್ಟು ವರ್ಕ್ ಮಾಡಿದ್ದು, ಇದಕ್ಕೆ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಸಾಥ್ ನೀಡಿರೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಅಂದಹಾಗೆ ಕೊರೊನಾ ಲಾಕ್ ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾದ ಕೆಲಸಗಳು ಈಗ ಮತ್ತೆ ಆರಂಭವಾಗಿವೆ. ನಿರ್ದೇಶಕ ಮಹೇಶ್ ಕುಮಾರ್ ರವಿ ಬಸ್ರೂರ್ ಸಂಗೀತವಿರುವ ಹಾಡಿನ ರೆಕಾರ್ಡಿಂಗ್ ನೊಂದಿಗೆ ಕೆಲಸ ಆರಂಭಿಸಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಹಾಡುಗಳಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ, ಉಳಿದಂತೆ ಇನ್ನೆರಡು ಹಾಡುಗಳಿಗೆ ರವಿ ಬಸ್ರೂರ್ ಮತ್ತು ಕಿನ್ನಲ್ ರಾಜ್ ಸಾಹಿತ್ಯವಿದೆ.
ಮೈಸೂರಿನಿಂದ ಶೂಟಿಂಗ್ ಪ್ರಾರಂಭ
ಮದಗಜ ಚಿತ್ರತಂಡ ಈಗಾಗಲೇ ಶೇ.25 ರಷ್ಟು ಚಿತ್ರದ ಶೂಟಿಂಗ್ ಮುಗಿಸಿದೆ. ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತ ಮುಗಿಸಿಕೊಂಡು ವಾರಾಣಾಸಿಯಲ್ಲಿ ಶೂಟಿಂಗ್ ನಡೆಸಿತ್ತು ಚಿತ್ರತಂಡ. ಎಲ್ಲಾ ಅಂದುಕೊಂಡಂತಾಗಿದ್ರೆ ಇಷ್ಟೊತ್ತಿಗಾಗಲೇ 2ನೇ ಹಂತದ ಚಿತ್ರೀಕರಣ ಶುರುಮಾಡಬೇಕಿತ್ತು.
ಇನ್ನು ರಾಜ್ಯ ಸರ್ಕಾರ ಸಿನಿಮಾದ ಶೂಟಿಂಗ್ ಗೆ ಅನುಮತಿ ಸಿಕ್ಕೊಡನೆ ಮೈಸೂರಿನಿಂದ ಮದಗಜದ ಶೂಟಿಂಗ್ ಪ್ರಾರಂಭವಾಗಲಿದೆ. ಗುಂಡ್ಲುಪೇಟೆ ಮತ್ತು ಹೊಗೆನೇಕಲ್ ಹಾಗೂ ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗುತ್ತದೆ. ಶ್ರೀಮುರುಳಿಗೆ ಮೊದಲ ಬಾರಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದು ಇಬ್ಬರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಮೇಲೆ ಕುತೂಹಲವಿದೆ.
ಈಗಾಗ್ಲೇ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಚಿತ್ರದ ಮೇಕಿಂಗ್ ತುಣುಕುಗಳನ್ನ ನೋಡಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








