ಬೆಂಗಳೂರು : ಕೊರೊನಾ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರ ಇಂಗು ತಿಂದ ಮಂಗನಂತಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಕುಮಾರಸ್ವಾಮಿ, ಕೊರೊನಾವನ್ನು ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ್ದಾರೆ.
ಹೆಚ್ ಡಿಕೆ ಟ್ವೀಟ್ ನಲ್ಲಿ, ಬೆಂಗಳೂರಿನಲ್ಲಿ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಈ ಸಮಯದಲ್ಲಿ ಸೋಂಕಿತನ ಚಿಕಿತ್ಸೆಗೆ ಬೆಡ್ ಗಳು ಇಲ್ಲದೇ ರೋಗಿಗಳು ಮನೆಯಲ್ಲಿ ಸಾಯುತ್ತಿದ್ದಾರೆ. ಇನ್ನೊಂದೆಡೆ ಶವ ಸಂಸ್ಕಾರ ಮಾಡಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
‘ಕೊರೊನಾ ಸೋಂಕು ಪೀಡಿತರು ಬೆಡ್ ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಳೆದ ಮೂರು ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು’.
ಜೊತೆಗೆ ‘ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದ್ದು, ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು ತಡೆಯಲು ಪೇಚಾಡುತ್ತಿದೆ. ನೆರೆಯ ಕೇರಳ ಸರ್ಕಾರ ಕೊರೊನಾ ತಡೆಗೆ ಕೈಗೊಂಡ ಕ್ರಮಗಳ ‘ಸಿದ್ಧ’ ಮಾದರಿ ಕಣ್ಣೆದುರಿಗಿದೆ. ರಾಜ್ಯದ ಸಚಿವರಲ್ಲಿ ಸಮನ್ವಯವಿಲ್ಲ, ಒಬ್ಬೊಬ್ಬರದು ಒಂದೊಂದು ನಿಲುವು. ಇವರ ತಿಕ್ಕಾಟದಲ್ಲಿ ರಾಜ್ಯದ ಜನತೆ ಹೈರಾಣಾಗಿದ್ದಾರೆ’
‘ಕೊರೊನಾ ಸೋಂಕು ಶರವೇಗದಲ್ಲಿ ಎಲ್ಲೆಡೆ ವ್ಯಾಪಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯಾದ್ಯಂತ ಸೋಂಕಿತರು ಚಿಕಿತ್ಸೆಯಿಲ್ಲದೆ ಸಾಯುತ್ತಿರುವ ಘಟನೆಗಳು ಕರುಳು ಹಿಂಡುತ್ತಿವೆ. ಸರ್ಕಾರ ಇನ್ನೂ ಮೈಮರೆತರೆ ಸೋಂಕಿತರು ಬೀದಿ ಬೀದಿಯಲ್ಲಿ ಸಾಯುವ ಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಲಿ ಕೊರೊನಾ ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಲಘುವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ’ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.








