ಬೆನ್ ಸ್ಟೋಕ್ಸ್ ಬೆನ್ನಿನಲ್ಲಿರುವ ಲಯನ್ ಫ್ಯಾಮೀಲಿ ಟ್ಯಾಟೂ ಹಿಂದಿನ ರಹಸ್ಯ ಏನು…?
ಬೆನ್ ಸ್ಟೋಕ್ಸ್.. ಸದ್ಯ ವಿಶ್ವ ಕ್ರಿಕೆಟ್ ಶ್ರೇಷ್ಠ ಆಲ್ ರೌಂಡರ್. ಇಂಗ್ಲೆಂಡ್ ಕ್ರಿಕೆಟ್ ತಂಡದ ಬೆನ್ನುಲುಬು. ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪ್ರಮುಖ ಆಟಗಾರ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕವೂ ಗಮನ ಸೆಳೆಯುತ್ತಿರುವ ಬೆನ್ ಸ್ಟೋಕ್ಸ್, ಮೈದಾನದ ಹೊರಗಡೆಯೂ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವೊಂದು ಬಾರಿ ವಿವಾದ, ಮತ್ತೆ ಕೆಲವು ಬಾರಿ ತನ್ನ ಹವ್ಯಾಸಗಳಿಂದ ಸುದ್ದಿಯ ಕೇಂದ್ರ ಬಿಂದುವಾಗುತ್ತಿರುವ ಬೆನ್ ಸ್ಟೋಕ್ಸ್ ಈಗ ತನ್ನ ಬೆನ್ನಿನಲ್ಲಿರುವ ಟ್ಯಾಟೂ ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ಬೆನ್ ಸ್ಟೋಕ್ಸ್ ಮೈ ಪೂರ್ತಿ ಟ್ಯಾಟೂ ಇರೋದು ಗೊತ್ತೆ ಇದೆ. 2018ರಲ್ಲೇ ತನ್ನ ಬೆನ್ನ ಮೇಲಿನ ಟ್ಯಾಟೂ ಚಿತ್ರದ ಹಿಂದಿನ ಅರ್ಥ ಏನು ಎಂಬುದನ್ನು ಹೇಳಿಕೊಂಡಿದ್ದರು. ಹಾಗೇ ರಾಜಸ್ತಾನ ರಾಯಲ್ಸ್ ತಂಡ ಬೆನ್ ಸ್ಟೋಕ್ಸ್ ಮೇಲಿನ ಟ್ಯಾಟೂ ಅನ್ನು ತನ್ನ ಇನ್ ಸ್ಟಾ ಗ್ರಾಮ್ನಲ್ಲಿ ಹಂಚಿಕೊಂಡಿತ್ತು. ಈ ಮೂಲಕ ಬೆನ್ ಸ್ಟೋಕ್ಸ್ ಅವರ ಟ್ಯಾಟೂ ಮತ್ತೆ ಪ್ರಚಾರಕ್ಕೆ ಬಂದಿದೆ. ಕ್ರಿಕೆಟ್ ಆಟಗಾರರಲ್ಲಿ ಇದು ಶ್ರೇಷ್ಠ ಟ್ಯಾಟೂ ? ಹಲ್ಲಾ ಬೋಲ್… ರಾಯಲ್ಸ್ ಫ್ಯಾಮಿಲಿ ಎಂದು ಸಹ ರಾಜಸ್ತಾನ ರಾಯಲ್ಸ್ ತನ್ನ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿತ್ತು.
ಅಂದ ಹಾಗೇ ಬೆನ್ ಸ್ಟೋಕ್ಸ್ ಅವರ ಟ್ಯಾಟೂ ಅವರ ಕುಟುಂಬವನ್ನು ಪ್ರತಿನಿಧಿಸುತ್ತಿದೆ. ಬೆನ್ನಿನಲ್ಲಿ ನಾಲ್ಕು ಸಿಂಹದ ಮುಖಗಳು ಕಾಣುತ್ತವೆ. ಸಿಂಹ – ಸಿಂಹಿಣಿ ಮತ್ತು ಎರಡು ಸಿಂಹದ ಮರಿಗಳು. ಇದು ಬೆನ್ ಸ್ಟ್ರೋಕ್ಸ್ ಅವರ ಫ್ಯಾಮಿಲಿಯನ್ನು ಪ್ರತಿನಿಧಿಸುತ್ತಿದೆ. ಸ್ಟೋಕ್ಸ್, ಅವರ ಪತ್ನಿ ಕ್ಲಾರೆ ರಟ್ಕ್ಲಿಫ್, ಮಕ್ಕಳಾದ ಲೇಟನ್ ಮತ್ತು ಲಿಬ್ಬಿ ಹೀಗೆ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದಾರೆ. ತನ್ನ ಕುಟುಂಬವನ್ನು ಅತೀಯಾಗಿ ಪ್ರೀತಿಸುವ ಬೆನ್ ಸ್ಟೋಕ್ಸ್ ತನ್ನ ಬೆನ್ನ ಮೇಲೆ ಸಿಂಹ ವಂಶ ಎಂಬುದನ್ನು ಸಾರಿ ಸಾರಿ ಹೇಳುವಂತೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಹಾಕಿಸಿಕೊಳ್ಳಲು ತೆಗೆದುಕೊಂಡಿರುವ ಸಮಯ ಬರೋಬ್ಬರಿ 28 ಗಂಟೆ. ತನ್ನ ಕುಟುಂಬದ ಪ್ರೀತಿಗಾಗಿ ಸ್ಟೋಕ್ಸ್ ಅವರು ನೋವುಗಳನ್ನು ಸಹಿಸಿಕೊಂಡಿದ್ದಾರೆ.
ಟ್ಯಾಟೂ ಹಾಕಿಕೊಳ್ಳುವುದನ್ನು ಎಲ್ಲರೂ ಇಷ್ಟಪಡುವುದಿಲ್ಲ. ನನ್ನ ಎಲ್ಲಾ ಟ್ಯಾಟೂಗಳು ನನ್ನ ವೈಯಕ್ತಿಕ ಬದುಕನ್ನು ಪ್ರತಿನಿಧಿಸುತ್ತದೆ. ಹಾಗೇ ಇದು ನನಗೆ ವಿಶೇಷವಾಗಿದೆ. ನನ್ನ ಕುಟುಂಬ ಸದಸ್ಯರು ಸದಾ ಅಂದ್ರೆ ಪ್ರವಾಸದ ವೇಳೆಯಲ್ಲೂ ಜೊತೆಯಾಗಿಯೇ ಇರುತ್ತಾರೆ ಎಂದು ಬೆನ್ ಸ್ಟೋಕ್ಸ್ ಎರಡು ವರ್ಷಗಳ ಹಿಂದೆಯೇ ಹೇಳಿಕೊಂಡಿದ್ದರು.









