ಕೋವಿಡ್ ಸವಾಲಿನ ನಡುವೆ ಶಿಕ್ಷಣ ಯೋಧರ ಕಥೆ-ವ್ಯಥೆ
ಬೆಂಗಳೂರು, ಸೆಪ್ಟೆಂಬರ್06: ಶಾಲೆಗಳು ಇನ್ನೂ ಪುನರಾರಂಭಗೊಳ್ಳದ ಹಿನ್ನೆಲೆಯಲ್ಲಿ , ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. ತಮ್ಮ ಹಣೆಬರಹವನ್ನು ದೂರುತ್ತಾ ಸುಮ್ಮನೆ ಕುಳಿತುಕೊಳ್ಳದೆ ಜೀವನೋಪಾಯಕ್ಕಾಗಿ ಸಿಕ್ಕಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಕೃಷಿಭೂಮಿಯಲ್ಲಿ ದೈನಂದಿನ ಕೂಲಿ ಕಾರ್ಮಿಕರಾಗಿ ದುಡಿಯುವುದರಿಂದ ಹಿಡಿದು ಕುರಿ ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಯಾವುದೇ ಉದ್ಯೋಗವನ್ನು ನಡೆಸಲು ಅವರು ಹಿಂದೆ ಮುಂದೆ ನೋಡುತ್ತಿಲ್ಲ.
ಕಳೆದ 15 ವರ್ಷಗಳಿಂದ ಬೆಂಗಳೂರು ಗ್ರಾಮೀಣ ಪ್ರದೇಶದ ಹೆಸರಾಂತ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕರೊಬ್ಬರು ಕೊರೋನಾ ಸಾಂಕ್ರಾಮಿಕದಿಂದಾಗಿ ಬದಲಾದ ಪರಿಸ್ಥಿತಿಯಲ್ಲಿ ಬದುಕಿನ ನಿರ್ವಹಣೆಗಾಗಿ ಗೋಡೆಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವವರನ್ನು ಮಾತ್ರ ಶಿಕ್ಷಕರಾಗಿ ಸರ್ಕಾರ ಪರಿಗಣಿಸುತ್ತದೆ ಎಂದು ಹೇಳಿರುವ ಅವರು ಹಲವಾರು ವಿನಂತಿಗಳ ಹೊರತಾಗಿಯೂ, ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ಯಾವುದೇ ಬೆಂಬಲವನ್ನು ನೀಡಲಿಲ್ಲ. ಕುಟುಂಬ ನಿರ್ವಹಣೆ ಪೂರೈಸಲು ಬೇರೆ ದಾರಿ ಇಲ್ಲದೇ ಈ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಶಿಕ್ಷಕ ಮಾರ್ಚ್ ನಿಂದ ಶಾಲಾ ಮಂಡಳಿ ವೇತನವನ್ನು ಪಾವತಿಸದ ಕಾರಣ ತಮ್ಮ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ನಾನು 21 ವರ್ಷಗಳಿಂದ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆ. ಸಂಬಳವಿಲ್ಲದ ಕಾರಣ ನಾನು ಮತ್ತೆ ಹಳ್ಳಿಗೆ ಬರಬೇಕಾಯಿತು. ಈಗ ನಾನು ಕೃಷಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ ಅವರು, ಇತರರ ಜಮೀನಿನಲ್ಲಿ ಕೆಲಸ ಮಾಡಿ ದೈನಂದಿನ ವೇತನವನ್ನೂ ಸಹ ಪಡೆಯುತ್ತೇನೆ ಎಂದು ತಿಳಿಸಿದರು.
ಬೆಂಗಳೂರಿನ ಮತ್ತೊಂದು ಖಾಸಗಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ತಮ್ಮ ಗ್ರಾಮಕ್ಕೆ ಸ್ಥಳಾಂತರಗೊಂಡು ಈಗ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ.
ಅರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನನಗೆ ಬೆಂಗಳೂರಿನಲ್ಲಿ ಬಾಡಿಗೆ ಪಾವತಿಸಲು ಸಾಧ್ಯವಾಗಲಿಲ್ಲ. ಊರಿಗೆ ಸ್ಥಳಾಂತರಗೊಂಡು ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳುವುದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು. ಸಹಜ ಸ್ಥಿತಿಗೆ ಪರಿಸ್ಥಿತಿ ಮರಳಿದಾಗ ಪುನಃ ಶಿಕ್ಷಕ ವೃತ್ತಿಗೆ ಮರಳುವುದಾಗಿ ಹೇಳಿದರು.
ಮತ್ತೊಬ್ಬ ಖಾಸಗಿ ಶಾಲೆಯ ಗಣಿತ ಶಿಕ್ಷಕರ ಪ್ರಕಾರ, ಅಹಂ ಅನ್ನು ಬದಿಗಿಟ್ಟು ಬದುಕಲು ಏನಾದರೂ ಮಾಡಬೇಕಾಗಿದೆ ಮತ್ತು ಅದನ್ನು ಅವರು ಮಾಡುತ್ತಿದ್ದಾರೆ. ನಾನು ಶಿಕ್ಷಕನಾಗಲು ತರಬೇತಿ ಪಡೆದಿದ್ದೇನೆ ಎಂದು ನಾನು ಒಪ್ಪುತ್ತೇನೆ. ಆದರೆ ಪ್ರಸ್ತುತ ಬಿಕ್ಕಟ್ಟನ್ನು ನಿವಾರಿಸಲು, ನನಗೆ ನೀಡಲಾಗುವ ಯಾವುದೇ ಉದ್ಯೋಗಗಳನ್ನು ನಾನು ಸ್ವೀಕರಿಸುತ್ತಿದ್ದೇನೆ. ಇಂದು ನಾನು ಮೇಸ್ತ್ರಿ ಆಗಿ ಕೆಲಸ ಮಾಡಬಹುದು, ನಾಳೆ ನಾನು ಜಮೀನಿನಲ್ಲಿ ಕೆಲಸ ಮಾಡುತ್ತೇನೆ. ಶಾಲೆಗಳು ಪುನರಾರಂಭವಾಗುವವರೆಗೆ ಬದುಕಲು ನಾನು ಯಾವುದೇ ಕೆಲಸವನ್ನು ಮಾಡಲು ತಯಾರಿದ್ದೇನೆ. ನನಗೆ ಯಾವುದೇ ಅಹಂ ಇಲ್ಲ ಎಂದು ಅವರು ಹೇಳಿದ್ದಾರೆ.