ಜುಲೈ 5 ರಂದು ಈ ವರ್ಷದ ಮೂರನೇ ಚಂದ್ರಗ್ರಹಣ
ಮಂಗಳೂರು, ಜುಲೈ 4: 2020ನೇ ವರ್ಷದ ಮೂರನೇ ಚಂದ್ರಗ್ರಹಣವು ಜುಲೈ 5 ರಂದು ಸಂಭವಿಸಲಿದ್ದು, ಜನವರಿ 10 ರಂದು ಮೊದಲ ಚಂದ್ರಗ್ರಹಣ ಮತ್ತು ಜೂನ್ 5 ರಂದು ವರ್ಷದ ಎರಡನೇ ಚಂದ್ರ ಗ್ರಹಣ ಸಂಭವಿಸಿದೆ.
ಚಂದ್ರನ ಮುಖದ ಮೇಲೆ ಪೆನಂಬ್ರಲ್ ಗ್ರಹಣವು ಕಪ್ಪು ಛಾಯೆಯನ್ನು ಮಾತ್ರ ಸೃಷ್ಟಿಸುತ್ತದೆ.
ಆಕಾಶಕಾಯವು ಪೆನಂಬ್ರಾ ಅಥವಾ ನೆರಳಿನ ಹೊರ ಭಾಗದ ಮೂಲಕ ಹಾದು ಹೋದಾಗ, ಪೆನಂಬ್ರಲ್ ಗ್ರಹಣ ಗೋಚರವಾಗುತ್ತದೆ.
ಭಾರತದಲ್ಲಿ ಜುಲೈ 5 ರ ಚಂದ್ರ ಗ್ರಹಣವು ಗೋಚರಿಸುವುದಿಲ್ಲ. ಏಕೆಂದರೆ ಅದು ಹಗಲಿನ ಸಮಯವಾಗಿದ್ದು ಭಾರತದಲ್ಲಿ ಪ್ರಕಾಶಮಾನವಾದ ಸೂರ್ಯನ ಬೆಳಕಿರುತ್ತದೆ. ಲ್ಯಾಟಿನ್ ಅಮೆರಿಕನ್ ದೇಶಗಳು, ಯುಎಸ್‌ಎ, ಮೆಕ್ಸಿಕೊ, ಕೆನಡಾ, ಕ್ಯೂಬಾ ಹಾಗೂ ಪಶ್ಚಿಮ ಯೂರೋಪಿನ್ ರಾಷ್ಟ್ರಗಳಾದ ಯುಕೆ, ಸ್ಪೇನ್, ಜರ್ಮನಿ, ಇಟಲಿ ಮತ್ತು ಆಫ್ರಿಕಾದ ಹೆಚ್ಚಿನ ದೇಶಗಳಲ್ಲಿ ಈ ಚಂದ್ರಗ್ರಹಣ ಗೋಚರವಾಗಲಿದೆ.
ಜುಲೈ 4 ಮತ್ತು ಜುಲೈ 5 ರ ರಾತ್ರಿ ಚಂದ್ರ ಗ್ರಹಣ ಸಂಭವಿಸಲಿದ್ದು, ಭಾರತದಲ್ಲಿ ಜುಲೈ 5 ರ ಬೆಳಿಗ್ಗೆ 8:30 ರಿಂದ 11:30 ರವರೆಗೆ ಚಂದ್ರ ಗ್ರಹಣವು ಸಂಭವಿಸಲಿದೆ. ಈ ಗ್ರಹಣವು 2 ಗಂಟೆ 45 ನಿಮಿಷಗಳವರೆಗೆ ಇರಲಿದೆ.
ಸೂರ್ಯ, ಚಂದ್ರ ಮತ್ತು ಭೂಮಿಯು ಸರಳ ರೇಖೆಯಲ್ಲಿದ್ದು ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಸೂರ್ಯನ ಬೆಳಕು ಚಂದ್ರನ ಮೇಲ್ಮೈಗೆ ತಲುಪುವ ಬದಲು, ಭೂಮಿಯ ನೆರಳು ಚಂದ್ರನ ಮೇಲೆ ಹಾದುಹೋದಾಗ ಚಂದ್ರಗ್ರಹಣವು ಸಂಭವಿಸುತ್ತದೆ.