ಜೊಹಾನ್ಸ್ಬರ್ಗ್, ಜೂನ್ 3 : ಲಾಕ್ ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ನೆರೆ ರಾಷ್ಟ್ರ ಕಿಂಗ್ಡಂ ಆಫ್ ಲೆಸೊಥೊದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವುದಾಗಿ ಸರ್ಕಾರ ಹೇಳಿದೆ.
ವಂದೇ ಭಾರತ್ ಮಿಷನ್ ಕಾರ್ಯಚರಣೆಯ ಮೂರನೇ ಹಂತದಲ್ಲಿ ದಕ್ಷಿಣ ಆಫ್ರಿಕಾ ಸರ್ಕಾರದ ಅನುಮತಿ ನೀಡಿದ ನಂತರ ಏರ್ ಇಂಡಿಯಾ ವಿಮಾನವು ಜೂನ್ 18ರಂದು ಜೊಹಾನ್ಸ್ಬರ್ಗ್ನಿಂದ ದೆಹಲಿ ಮತ್ತು ಮುಂಬೈಗೆ ಅನಿವಾಸಿ ಭಾರತೀಯರನ್ನು ಕರೆತ ರಲಿದೆ ಎಂದು ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.
ಭಾರತ ಸರ್ಕಾರ ವಂದೇ ಭಾರತ್ ಮಿಷನ್ ನಡಿಯಲ್ಲಿ ವಿವಿಧ ದೇಶಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ಭಾರತೀಯರನ್ನು ಕರೆತರಲಾಗುತ್ತಿದ್ದು, ಭಾರತಕ್ಕೆ ವಾಪಸಾಗಲು ಬಯಸುವ ಅನಿವಾಸಿ ಭಾರತೀಯರು ವಿಮಾನ ಟಿಕೆಟ್ ದರವನ್ನು ಪಾವತಿಸಬೇಕು.
ಮೊದಲ ಆದ್ಯತೆಯನ್ನು ತುರ್ತುಸ್ಥಿತಿಯಲ್ಲಿ ತಾಯ್ನಾಡಿಗೆ ಮರಳಬೇಕಾದವರಿಗೆ, ಕೆಲಸ ಕಳೆದುಕೊಂಡವರಿಗೆ, ವೀಸಾ ಅವಧಿ ಮುಗಿದವರಿಗೆ, ವಲಸೆ ಕಾರ್ಮಿಕರಿಗೆ, ಗರ್ಭಿಣಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ನೀಡಲಾಗಿದೆ.
ಕೊರೋನಾ ಸೋಂಕಿನ ರೋಗ ಲಕ್ಷಣಗಳು ಇಲ್ಲದೇ ಇರುವ ಪ್ರಯಾಣಿಕರನ್ನು ಮಾತ್ರ ಭಾರತಕ್ಕೆ ಕರೆತರಲಾಗುತ್ತಿದ್ದು, ಭಾರತಕ್ಕೆ ಮರಳಿದ ಬಳಿಕ ಅವರ ಸ್ವಂತ ಖರ್ಚಿನಲ್ಲಿ 7 ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಬೇಕು. ನಂತರ 7 ದಿನ ಮನೆಯಲ್ಲಿ ಐಸೋಲೇಷನ್ ಗೆ ಒಳಗಾಗಬೇಕು.
ಮೇ 25ರಿಂದ ಭಾರತದಲ್ಲಿ ದೇಶೀಯ ವಿಮಾನ ಹಾರಾಟ ಪ್ರಾರಂಭವಾಗಿದ್ದರೂ, ವಿದೇಶದಿಂದ ಬಂದವರು ಕ್ವಾರಂಟೈನ್ ಅವಧಿ ಮುಗಿಸದೇ ದೇಶದ ವಿಮಾನದಲ್ಲಿ ಪ್ರಯಾಣ ಬೆಳೆಸುವಂತಿಲ್ಲ. ಭಾರತ ತಲುಪಿದ ತಕ್ಷಣ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಕಡ್ಡಾಯ ಎಂದು ಭಾರತೀಯ ಹೈಕಮಿಷನ್ ಹೇಳಿದೆ.








