ಬೇರೆ ಬೇರೆ ಮೂಲಗಳಿಂದ ಕಚ್ಚಾ ತೈಲ ಸಂಗ್ರಹಣೆಗೆ ಚಿಂತನೆ – Saaksha Tv
ಬೆಂಗಳೂರು: ಬೇರೆ ಬೇರೆ ಮೂಲಗಳಿಂದ ಹೆಚ್ಚಾಗಿ ಕಚ್ಚಾ ತೈಲ ಸಂಗ್ರಹಣೆಯನ್ನು ಮಾಡುವತ್ತ ಗಮನಹರಿಸುತ್ತಿದ್ದೇವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವಿವಿಧ ಮಾಧ್ಯಮಗಳ ಸಂಪಾದಕರ ಜೊತೆ ಸಂವಾದ ನಡೆಸಿದ ಅವರು, ಕಚ್ಚಾ ತೈಲ ಬೆಲೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಈಗಾಗಲೇ ತೈಲ ಬೆಲೆ ವಿಚಾರವಾಗಿ ಪೆಟ್ರೋಲಿಯಂ ಸಚಿವರೊಂದಿಗೆ ಸಂಪರ್ಕದಲ್ಲಿದ್ದೇನೆ. ಬೇರೆ ಬೇರೆ ಮೂಲಗಳಿಂದ ಹೆಚ್ಚಾಗಿ ಕಚ್ಚಾ ತೈಲ ಸಂಗ್ರಹಣೆಯನ್ನು ಮಾಡುವತ್ತ ಗಮನಹರಿಸುತ್ತಿದ್ದೇವೆ ಎಂದು ಹೇಳಿದರು. 
ಉಕ್ರೇನ್ ಯುದ್ಧದ ಆರಂಭಕ್ಕೂ ಮುನ್ನವೇ ತಾವು ತೈಲ ಬೆಲೆ ಏರಿಕೆಯ ಊಹೆ ಇತ್ತು. ಮುಂದಿನ ವರ್ಷಕ್ಕೆ ಕಚ್ಚಾ ತೈಲ ಬೆಲೆ ಎಷ್ಟಾಗಬಹುದು ಎಂಬುದನ್ನು ಮೊದಲೇ ಊಹೆ ಮಾಡಿದ್ದೇವು. ಆದರೆ ಈಗ ಕಚ್ಚಾ ತೈಲ ಬೆಲೆ ನಮ್ಮ ಊಹೆಯನ್ನ ಹೆಚ್ಚು ಮಾಡುತ್ತಿದೆ. ಕಚ್ಚಾ ತೈಲದ ಮೇಲೆ ಯುದ್ಧದ ಪರಿಣಾಮದ ಆಧಾರದೊಂದಿಗೆ ನಾವು ಲೆಕ್ಕಾಚಾರ ಇಡುತಿದ್ದೆವು ಎಂದು ತಿಳಸಿದ್ದಾರೆ.
ಉಕ್ರೇನ್‍ನಿಂದ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ಈಗ ಯುದ್ಧದಿಂದಾಗಿ ಖಾದ್ಯ ತೈಲ ಪೂರೈಕೆಯಲ್ಲಿ ನಮ್ಮ ಮೇಲೆ ಪರಿಣಾಮ ಬೀರಬಹುದಾಗಿದೆ. ಹೀಗಾಗಿ ಪರ್ಯಾಯ ಮಾರ್ಗಗಳ ಬಗ್ಗೆಯೂ ಯೋಚಿಸಿದ್ದೇವೆ. ಸೂರ್ಯಕಾಂತಿ ಎಣ್ಣೆ ಅಷ್ಟೇ ಅಲ್ಲ ಬೇರೆ ಬೇರೆ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲು ಗಮನಹರಿಸುತ್ತಿದ್ದೇವೆ. ಖಾದ್ಯ ತೈಲಗಳನ್ನು ತರಿಸಿಕೊಳ್ಳಲು ಬೇರೆ ಬೇರೆ ಭಾಗಗಳನ್ನ ನಾವು ನೋಡುತ್ತಿದ್ದೇವೆ ಎಂದು ವಿವರಿಸಿದರು.








