ಕನ್ನಡದ ಲಾ’ ಚಿತ್ರದ ಟ್ರೇಲರ್ ರಿಲೀಸ್…. ಜುಲೈ 17 ರಂದು ಸಿನಿಮಾ ಬಿಡುಗಡೆ
ಕನ್ನಡದ ʻಲಾʼ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಅಮೆಜಾನ್ ಪ್ರೈಮ್ ನಲ್ಲಿ ಇದೇ ಜುಲೈ 17 ರಂದು ಬಿಡುಗಡೆಯಾಗಲಿರುವ ʻಲಾʼ ಚಿತ್ರದ ಟ್ರೇಲರ್ ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಲಾಯ್ತು. ಪುನೀತ್ ರಾಜ್ಕುಮಾರ್ ರವರ ಪಿಆರ್ಕೆ ಪ್ರೊಡಕ್ಷನ್ ನಲ್ಲಿ ತಯಾರಾದ ಈ ಚಿತ್ರದ ಮೂಲಕ ರಾಗಿಣಿ ಚಂದ್ರನ್ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಬಹು ದೊಡ್ಡ ಅಪರಾಧಕ್ಕೆ ನ್ಯಾಯವನ್ನು ಕೋರುವ ಕಾನೂನು ವಿದ್ಯಾರ್ಥಿಯಾದ ನಂದಿನಿ ಅವರ ಜೀವನದ ಕತೆಯನ್ನು ಒಳಗೊಂಡಿದೆ. ‘ಲಾ’ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್ಕುಮಾರ್, ಎಂ ಗೋವಿಂದ ನಿರ್ಮಿಸಿದ್ದಾರೆ ಮತ್ತು ರಘು ಸಮರ್ಥ್ ನಿರ್ದೇಶಿಸಿದ್ದಾರೆ. ‘ಲಾ’ ಕನ್ನಡ ಸಿನೆಮಾದ ಮುಖ್ಯ ಪಾತ್ರದಲ್ಲಿ ರಾಗಿಣಿ ಚಂದ್ರನ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಮುಖ್ಯಮಂತ್ರಿ ಚಂದ್ರು, ಅಚ್ಯುತ್ ಕುಮಾರ್, ಸುಧಾರಾಣಿ ಇತರರು ನಟಿಸಿದ್ದಾರೆ.
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಥಮ ಪ್ರದರ್ಶನ ಕಾಣುತ್ತಿರುವ ‘ಲಾ’ ಚಿತ್ರ ಭಾರತ ಸೇರಿದಂತೆ ವಿಶ್ವದಾದ್ಯಂತ 200 ಕ್ಕೂ ಹೆಚ್ಚು ದೇಶಗಳಲ್ಲಿ 2020 ರ ಜುಲೈ 17 ರಿಂದ ವೀಕ್ಷಕರಿಗೆ ಲಭ್ಯವಾಗಲಿದೆ.
“ಲಾ ಚಿತ್ರ ನನ್ನ ಹೃದಯಕ್ಕೆ ಹತ್ತಿರದಲ್ಲಿದೆ, ಅದು ನನ್ನ ಚೊಚ್ಚಲ ಚಿತ್ರ ಎಂಬುದು ಮಾತ್ರ ಇದಕ್ಕೆ
ಕಾರಣವಲ್ಲ, ಈ ಚಿತ್ರವು ಪ್ರಮುಖ ಸಂದೇಶದ ಮೇಲೆ ಬೆಳಕು ಚೆಲ್ಲುತ್ತದೆ” ಎಂದು ‘ಲಾ’ ಚಿತ್ರದ ನಾಯಕ ನಟಿ ರಾಗಿಣಿ ಪ್ರಜ್ವಲ್ ಹೇಳಿಕೊಂಡಿದ್ದಾರೆ, “ನಂದಿನಿ, ದೃಢ ಮತ್ತು ಗಟ್ಟಿ ಹೃದಯದ ಮಹಿಳೆಯಾಗಿದ್ದು, ಕಠಿಣ ಪರಿಸ್ಥಿತಿಯನ್ನು ಸಂಪೂರ್ಣ ದೃಢ ನಿಶ್ಚಯ ಮತ್ತು ಪರಿಶ್ರಮದಿಂದ ಜಯಿಸುವವಳು. ಈ ಪ್ರಕಾರದಲ್ಲಿ ಲಾ ಚಿತ್ರ ದಾಖಲೆ ಬರೆಯುವುದು ಖಚಿತ. ಇದನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಮೆಚ್ಚುತ್ತಾರೆ ಎಂದು ನಾನು ಭಾವಿಸುತ್ತೇನೆ. ಲಾ ಚಿತ್ರದ ಕನಸಿನ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನಮ್ಮ ಚಿತ್ರ ಭಾರತದಲ್ಲಿ ಮಾತ್ರವಲ್ಲ 200 ದೇಶಗಳು ಮತ್ತು ಪ್ರಾಂತ್ಯಗಳ ಪ್ರೇಕ್ಷಕರಿಗೆ ಲಭ್ಯವಾಗುತ್ತದೆ ಎಂಬುದನ್ನು ಕೇಳಿ ನಾನು ರೋಮಾಂಚನಗೊಂಡಿದ್ದೇನೆ. ಈ ಪ್ರಕಾರದ ಬಿಡುಗಡೆ ಅತ್ಯಂತ ಪರಿಣಾಮಕಾರಿಯಾಗಿದೆ” ಎಂದರು.
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, “ಅಮೆಜಾನ್ ಪ್ರೈಮ್ ವಿಡಿಯೋ ನಮ್ಮ ಅತ್ಯಮೂಲ್ಯ ಪಾಲುದಾರರಲ್ಲಿ ಒಬ್ಬರು. ಇದಕ್ಕೂ ಮುನ್ನ 2016 ರಲ್ಲಿ ನಮ್ಮ ನಿರ್ಮಾಣದ ಚಿತ್ರಗಳಾದ ‘ಕವಲುದಾರಿ’ ಮತ್ತು ‘ಮಾಯಾ ಬಜಾರ್’ ಅದ್ಭುತ ಯಶಸ್ಸಿನ ನಂತರ, ‘ಲಾ’ ಚಿತ್ರದ ಮೂಲಕ ಮೂರನೇ ಸಹಯೋಗವಾಗಿದೆ ಮತ್ತು ನಾವು ವಿಶ್ವದಾದ್ಯಂತ ಬಿಡುಗಡೆ ಅಮೆಜಾನ್ ಪ್ರೈಮ್ ವಿಡಿಯೋದ ಪ್ರೈಮ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದ್ದೇವೆ. ‘ಲಾ’ ಚಿತ್ರದೊಂದಿಗೆ ನಾವು ನಮ್ಮ ಪ್ರೇಕ್ಷಕರನ್ನು ರಂಜಿಸಲು ಬಯಸುತ್ತೇವೆ, ಅದರೊಂದಿಗೆ ಮಹತ್ವದ ವಿಷಯವೊಂದನ್ನು ಬೆಳಕಿಗೆ ತರುತ್ತೇವೆ. 200 ದೇಶಗಳು ಮತ್ತು ಪ್ರಾಂತ್ಯಗಳ ಪ್ರೈಮ್ ಸದಸ್ಯರು ತಮ್ಮ ಮನೆಯಲ್ಲೇ ಸುರಕ್ಷತೆಯಿಂದ ಕುಳಿತು ಚಲನಚಿತ್ರವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂಬುದೇ ಖುಷಿ ನೀಡುವ ಸಂಗತಿ” ಎಂದರು.
ಸಾರಾಂಶ:
ಇದರಲ್ಲಿ ಅಪರಾಧ ಮತ್ತು ತನಿಖೆಗಳನ್ನು ಒಳಗೊಂಡ ಕಥೆಯಿದೆ. ಕೆಲವೊಮ್ಮೆ, ಸಾಕ್ಷ್ಯಾಧಾರದ ಕೊರತೆಯಿಂದಾಗಿ ಪ್ರಕರಣವನ್ನು ವಜಾಗೊಳಿಸಲಾಗುತ್ತದೆ ಮತ್ತು ಆರೋಪಿಗಳನ್ನು ಮುಕ್ತಗೊಳಿಸಲಾಗುತ್ತದೆ. ‘ಲಾ’, ಈ ಪ್ರಕಾರದ ಉಳಿದವುಗಳಿಂದ ಭಿನ್ನ ಮಾದರಿಯ ಚಿತ್ರವಾಗಿದೆ. ಅನಿಶ್ಚಿತ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದ ಕಾನೂನು ವಿದ್ಯಾರ್ಥಿನಿ ನಂದಿನಿ, ನಡೆದ ಭೀಕರ ಅಪರಾಧಕ್ಕಾಗಿ ನ್ಯಾಯ ದೊರಕಿಸಿ ಕೊಡಲು ಹೋರಾಡುತ್ತಾಳೆ.