ಬೀದರ್: ದೊಡ್ಡ ಸಂಬಳದ ಆಸೆಗೆ ಉಜ್ಬೇಕಿಸ್ತಾನಕ್ಕೆ (Uzbekistan) ಹೋಗಿದ್ದ ಬೀದರ್ (Bidar) ಹಾಗೂ ಕಲಬರಗಿ (Kalaburagi) ಮೂಲದ ಯುವಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಉಜ್ಬೇಕಿಸ್ತಾನದಲ್ಲಿ ಉದ್ಯೋಗ ಹಾಗೂ ಅನ್ನ, ನೀರು ಇಲ್ಲದೆ ಪರದಾಡುತ್ತಿದ್ದಾರೆ. ಬೀದರ್ ಹಾಗೂ ಕಲಬರಗಿಯ 14 ಜನ ಯುವಕರು ಲಕ್ಷಾಂತರ ಸಂಬಳದ ಆಸೆಗೆ ಮಧ್ಯವರ್ತಿಗಳಿಗೆ ಲಕ್ಷ ಲಕ್ಷ ಹಣ ನೀಡಿ ಉಜ್ಬೇಕಿಸ್ತಾನಕ್ಕೆ ತೆರಳಿ ವಂಚನೆಗೆ ಒಳಗಾಗಿದ್ದಾರೆ.
ಆದರೆ, ಅಲ್ಲಿ ಅವರ ಆಸೆ ಹಾಗೂ ಕನಸು ಕಮರಿ ಹೋಗಿದೆ. ಅಲ್ಲಿ ಉದ್ಯೋಗವೂ ಇಲ್ಲದೇ ತಿನ್ನಲು ಅನ್ನ ನೀರು ಕೂಡ ಸಿಗದೇ ಇದೀಗ ಯುವಕರು ಪರದಾಡುವಂತಾಗಿದೆ. ಉಜ್ಬೇಕಿಸ್ತಾನಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಯುವಕರು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ತಾವು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಸ್ವದೇಶಕ್ಕೆ ಮರಳಿ ಕರೆಯಿಸಿಕೊಳ್ಳುವಂತೆ ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯಗೆ ಮೋಸ ಹೋದ ಯುವಕರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ನಾವು ನಮ್ಮ ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಿದ್ದೇವೆ. ಇಲ್ಲಿ ಊಟ ಇಲ್ಲದೆ ಹಲವು ಜನ ಸತ್ತಿದ್ದಾರೆ. ನಮಗೆ ಭಯವಾಗುತ್ತಿದೆ. ಬೇಗ ನಮ್ಮನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಿ ಎಂದು ಯುವಕರು ಮನವಿ ಮಾಡಿದ್ದಾರೆ.