ಇಸ್ಲಾಮಾಬಾದ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ 8 ದಶಲಕ್ಷ ಡಾಲರ್‌ಗಿಂತ ಹೆಚ್ಚಿನ ಮೊತ್ತದ ನೆರವನ್ನು ನೀಡುತ್ತಿರುವುದಾಗಿ ಅಮೆರಿಕ ಘೋಷಿಸಿದೆ.
‘ಪಾಕಿಸ್ತಾನದಲ್ಲಿ 7,000 ಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, 130 ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಈ ಸಾಂಕ್ರಾಮಿಕ ಹೆಮ್ಮಾರಿಯನ್ನು ಎದುರಿಸಲು ಅಮೆರಿಕ ಪಾಕಿಸ್ತಾನದೊಂದಿಗೆ ಕೈ ಜೋಡಿಸಲಿದೆ. ಈ ಸಂಬಂಧ ಅಮೆರಿಕ ರಾಯಭಾರಿ ಪಾಲ್ ಜೋನ್ಸ್ ಅವರು ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ,’ ಎಂದು ಇಸ್ಲಾಮಾಬಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
‘ಇನ್ನು ಅಮೆರಿಕವು 8 ದಶಲಕ್ಷ ಡಾಲರ್‌ಗಳ ಈ ನೆರವಿನ ಮೂಲಕ ಪಾಕಿಸ್ತಾನದಲ್ಲಿ ಆವರಿಸುವ ಕೊರೊನಾ ವೈರಸ್ ಅನ್ನು ನಿಯಂತ್ರಿಸಲು ಮತ್ತು ಇಲ್ಲಿ ರೋಗ ಪೀಡಿತರಾಗಿರುವವರ ಹಿತ ಕಾಯಲು ಸಹಾಯ ಮಾಡಲಿದೆ’. ‘ಈ ಹಣವನ್ನು ಕೊರೊನಾ ವೈರಸ್ ವಿರುದ್ಧದ ಹಲವು ಕಾರ್ಯಗಳಿಗೆ ಬಳಸಬಹುದು. ಹಾಟ್ ಸ್ಪಾಟ್‌ಗಳಲ್ಲಿನ ಜನರನ್ನು ಪರೀಕ್ಷಿಸಲು ಮೂರು ಹೊಸ ಸಂಚಾರಿ ಲ್ಯಾಬ್‌ಗಳನ್ನು ಒದಗಿಸಬಹುದು. ಮತ್ತು, ಅವರಿಗೆ ಚಿಕಿತ್ಸೆ ನೀಡಬಹುದು. ಇದಕ್ಕಾಗಿ 3 ದಶಲಕ್ಷ ಅಮೆರಿಕ ಡಾಲರ್‌ಗಳು ಖರ್ಚಾಗಬಹುದು. ಇಸ್ಲಾಮಾಬಾದ್, ಸಿಂಧ್, ಪಂಜಾಬ್, ಖೈಬರ್, ಫಕ್ತುನ್‌ಖ್ವಾ, ಬಲೂಚಿಸ್ತಾನದ ಅತ್ಯಾಧುನಿಕ ಕ್ಷಿಪ್ರ ಕಾರ್ಯಾಚರಣೆ ಕೇಂದ್ರಗಳಿಗೆ 1 ದಶಲಕ್ಷ ಡಾಲರ್‌ಗಳನ್ನು ಬಳಕೆ ಮಾಡಿಕೊಳ್ಳಬಹುದು’ ಎಂದು ಅಮೆರಿಕ ತಿಳಿಸಿದೆ.








