ಬೆಂಗಳೂರು, ಮೇ 25 : ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಾ ಸಾಗಿದ್ದು, ಇದೀಗ ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಹೆಗಲು ಕೊಟ್ಟ ಕೊರೊನಾ ವಾರಿಯರ್ಸ್ ಪೊಲೀಸರಿಗೆ ಸೋಂಕು ಹಬ್ಬಿದೆ. ಸೋಂಕಿನ ವಿರುದ್ಧ ಹಗಲಿರುಳು ದುಡಿಯುವ, ಜನರ ಮಧ್ಯೆ ಇರುವ ವಾರಿಯರ್ಸ್ ಗೆ ಸೋಂಕು ಹಬ್ಬಿರೋದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ 6 ಮಂದಿ ಪೊಲೀಸರಿಗೆ ಕೊರೊನಾ ಬಂದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 2 ಸಾವಿರ ದಾಟಿದ್ದು, 2089ಕ್ಕೆ ಏರಿದೆ. ಉಡುಪಿಯಲ್ಲಿ ಮೂವರು, ಬೆಂಗಳೂರು, ದಕ್ಷಿಣ ಕನ್ನಡ, ಹಾಸನ, ತಲಾ ಒಬ್ಬರು ಪೊಲೀಸರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಉಡುಪಿಯಲ್ಲಿ ಮೂವರಿಗೆ ಸೋಂಕು!
ಕಳೆದ ಕೆಲ ದಿನಗಳಿಂದ ಉಡುಪಿಯಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ ಉಡುಪಿಯ ಮೂರು ಪೊಲೀಸರಿಗೆ ಸೋಂಕು ತಗುಲಿದ್ದು, ಆತಂಕ ಹೆಚ್ಚಾಗಿದೆ. ಇವರಿಗೆ ಮಹಾರಾಷ್ಟ್ರದಿಂದ ಬಂದವರು ತಪಾಸಣೆ ಮಾಡುವಾಗಲೋ ಅಥವಾ ಕಂಟೈನ್ಮೆಂಟ್ ಝೋಜ್ ನಲ್ಲೋ ಕೊರೊನಾ ಅಂಟಿಸಿದ್ದಾರೆ.
ಬ್ರಹ್ಮಾವರ ಠಾಣೆ ಸಿಬ್ಬಂದಿ ಟೋಲ್ ಗೇಟ್, ಚೆಕ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಸೋಂಕು ತಾಕಿದೆ ಎನ್ನಲಾಗಿದೆ. ಇನ್ನು ಅಜೆಕಾರು ಠಾಣೆ ಎಎಸ್ ಐ ಹಾಗೂ ಕಾರ್ಕಳ ಠಾಣೆಯ ಪೊಲೀಸ್ ಕಾನ್ಟೇಬಲ್ ಕ್ವಾರಂಟೈನ್ ಸೆಂಟರ್ ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡಿದ್ದರು. ಇವರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಇನ್ನು ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ಫ್ರೇಜರ್ ಟೌನ್ ಟ್ರಾಫಿಕ್ ಪೊಲೀಸ್ ಎಂದು ತಿಳಿದುಬಂದಿದೆ. ಇವರು ನಿತ್ಯ ಬೇರೆ ಬೇರೆ ಪಾಯಿಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಸೋಂಕಿತನ ಮೂಲ ಪತ್ತೆಯಾಗಿಲ್ಲ.
ಹಾಸನ ನಗರದ ನಿವಾಸಿ ಬೆಂಗಳೂರಿನ ಕೆಎಸ್‌ಆರ್‌ಪಿ ಕಾನ್ಸ್ ಸ್ಟೇಬಲ್‌ಗೆ ಕೊರೊನಾ ವಕ್ಕರಿಸಿದೆ. ಇವರಿಗೆ ಬೆಂಗಳೂರಿಗೆ ಸರ್ಕಾರಿ ವಾಹನದಲ್ಲೇ ಕರ್ತವ್ಯ ನಿಮಿತ್ತ ಪ್ರಯಾಣ ಮಾಡಿ ಬಂದ ಟ್ರಾವೆಲ್ ಹಿಸ್ಟರಿ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಠಾಣೆಯ ಪೊಲೀಸ್ ಸಿಬ್ಬಂದಿಗೂ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇವರಿಗೆ, ಆಧಾರ್ ಕಾರ್ಡ್ ನಿಂದಾಗಿ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ. ಮುಂಬೈಯಿಂದ ಬಂದ ವಿಟ್ಲದ ವ್ಯಕ್ತಿಯೊಬ್ಬನನ್ನು ಕ್ವಾರೆಂಟೈ ನ್ ಗೆ ಕರೆದುಕೊಂಡು ಹೋಗುವ ಆಂಬುಲೆನ್ಸ್ ರಸ್ತೆ ಮಧ್ಯೆಯಲ್ಲೇ ಬಿಟ್ಟು ಹೋಗಿತ್ತು. ಇದರಿಂದ ಕೋಪಗೊಂಡ ಆತ ಸ್ಥಳೀಯ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿ ಅಲ್ಲಿ ತನ್ನ ಆಧಾರ್ ಕಾರ್ಡ್ ಕೊಟ್ಟಿದ್ದ. ಇದೇ ಆಧಾರ್ ಕಾರ್ಡ್ ಮೂಲಕ ಕೊರೊನಾ ಠಾಣೆಗೂ ಕಾಲಿಟ್ಟಿದೆ.
ಒಟ್ಟಾರೆ ಕೊರೊನಾ ವಿರುದ್ಧ ಸಮರ ಸಾರಿ ಪ್ರಾಣವನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿರುವ ಕೊರೊನಾ ಯೋಧರಿಗೂ ಸೋಂಕು ತಗುಲಿರೋದು ಈಗ ಆತಂಕಕ್ಕೆ ಕಾರಣವಾಗಿದೆ.








