ಕಟ್ಟಡ ಕಾಮಗಾರಿ ವೇಳೆ ಪಕ್ಕದ ಮನೆ ಗೋಡೆ ಕುಸಿದು ಕಾರ್ಮಿಕ ಸಾವು
ಬೆಳಗಾವಿ: ಕಟ್ಟಡ ಕಾಮಗಾರಿ ವೇಳೆ ಪಕ್ಕದ ಮನೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಮಾರುತಿಬೀದಿ ಮಹಾದೇವ ದೇಗುಲ ಬಳಿ ನಡೆದಿದೆ.
60 ವರ್ಷದ ಕಲ್ಲಪ್ಪ ಮಾದರ ಮೃತ ಕಾರ್ಮಿಕನಾಗಿದ್ದು, ಮಣ್ಣಿನಡಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ (SDRF) ರಕ್ಷಸಿದ್ದಾರೆ. ಇವರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅರ್ಜುನ ಮಾದರ, ಮಹೇಂದ್ರ ಮಾದರ, ನಾಗರಾಜ ಮಾದರ ಗಾಯಗೊಂಡ ಕಾರ್ಮಿಕರು.
ಇನ್ನೂ ಕಟ್ಟಡ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿತ್ತು ಎಂದು ಆರೋಪ ಕೇಳಿ ಬಂದಿದೆ. ಅಲ್ಲದೇ ಪಕ್ಕದಲ್ಲಿ ಹಳೆಯ ಮನೆ ಇದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಕ್ಕೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಹಾಗೇ ಈ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ಧ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಜಯತೀರ್ಥ ಸವದತ್ತಿ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹಳೆಯ ಮನೆಯ ಗೋಡೆಗಳು ಶಿಥಿಲಗೊಂಡಿವೆ. ಈ ಸಂಬಂಧ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಳೆದ ಬಾರಿಯೂ ನನ್ನ ವಾರ್ಡ್ನಲ್ಲಿ ಇದೇ ಮಾದರಿ ಘಟನೆ ಆಗಿತ್ತು. ಈ ವೇಳೆ ಕಟ್ಟಡ ಕಟ್ಟುವಾಗ ಮುಂಜಾಗ್ರತಾ ಕ್ರಮ ವಹಿಸಬೇಕು. ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವಾಗ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಎಂದು ಜಯತೀರ್ಥ ಸವದತ್ತಿ ಆಗ್ರಹಿಸಿದ್ದಾರೆ. ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.









