ಲಾಕ್ ಡೌನ್ ನಡುವೆಯೂ ನಡೆದ ವಿವಾಹ ಸಮಾರಂಭ – ವಧು-ವರರಿಬ್ಬರಿಗೂ ಕೊರೊನಾ ಸೋಂಕು
ತಿರುವನಂತಪುರಂ, ಜುಲೈ 28: ಪ್ರಸ್ತುತ ಕೊರೋನವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಾಮೂಹಿಕ ಕೂಟಗಳಿಗೆ ನಿರ್ಬಂಧ ಹೇರಿದ್ದರೂ ಮತ್ತು ಎಚ್ಚರಿಕೆಗಳ ಹೊರತಾಗಿಯೂ, ಜುಲೈ 17 ರಂದು ಕೇರಳದ ಕಾಸರಗೋಡು ಜಿಲ್ಲೆಯ ಚೆಂಗಲ ಪಂಚಾಯಿತಿಯ ಪಿಲಂಕತ್ತದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ 125 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು ಎಂದು ವರದಿಗಳು ತಿಳಿಸಿವೆ. ಜುಲೈ 17 ರ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡವರನ್ನು, ಕೊರೋನವೈರಸ್ ಪರೀಕ್ಷೆಗೆ ಒಳಪಡಿಸಿದ್ದು, ಮದುಮಗ ಮತ್ತು ವಧುವಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವುದು ಕಂಡು ಬಂದಿದೆ. ವಿವಾಹದಲ್ಲಿ ಪಾಲ್ಗೊಂಡಿದ್ದ 128 ಮಂದಿಯ, ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ, ಬದಿಯಡ್ಕ ಪೊಲೀಸರು ವಧುವಿನ ತಂದೆಯ ವಿರುದ್ಧ ಕೇರಳ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಕಾಸರಗೋಡು ಜಿಲ್ಲಾ ಪ್ರಾಧಿಕಾರ ತಿಳಿಸಿದೆ. ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಎರಡು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡ ವಿಧಿಸಲಾಗುತ್ತದೆ.
ಮದುವೆ ಕಾರ್ಯಕ್ರಮಗಳಿಗೆ ಹಾಜರಾಗಲು ಕೇವಲ 50 ಜನರಿಗೆ ಮಾತ್ರ ಅವಕಾಶವಿದೆ. ಕೊರೊನಾ ವೈರಸ್ ದೃಢಪಟ್ಟ ವಧುವಿನ ತಂದೆ ಕೆಲವು ತಿಂಗಳ ಹಿಂದೆಯಷ್ಟೇ ವರನ ಜೊತೆಗೆ ದುಬೈನಿಂದ ಕೇರಳಕ್ಕೆ ಆಗಮಿಸಿದ್ದರು.
ಸೋಂಕಿಗೆ ಒಳಗಾದವರೆಲ್ಲರೂ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಪಡಲು ತಿಳಿಸಲಾಗಿದೆ. ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿರುವವರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಲು ಕೋರಲಾಗಿದೆ.
ಏತನ್ಮಧ್ಯೆ, ಕಾಸರಗೋಡು, ಮಂಜೇಶ್ವರಂ, ಹೊಸ್ದುರ್ಗ್, ಕುಂಬಳ, ಮತ್ತು ನೀಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ನಿರ್ಬಂಧ ಆದೇಶಗಳನ್ನು ವಿಧಿಸಲಾಗಿದ್ದು, ಆ ಪ್ರದೇಶಗಳಲ್ಲಿ ಯಾವುದೇ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಅನುಮತಿಸಲಾಗುವುದಿಲ್ಲ.
ಕೇರಳದಲ್ಲಿ ಪ್ರತಿದಿನ 20,000 ಕ್ಕೂ ಹೆಚ್ಚು ಕೋವಿಡ್-19 ಪರೀಕ್ಷೆಗಳು ನಡೆಯುತ್ತಿವೆ.