ಚಿಕ್ಕಮಗಳೂರು: ಪಡೆದ ಸಾಲ ತೀರಿಸದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಕೈ, ಕಾಲು ಕಟ್ಟಿ ಯುವಕರ ಗುಂಪೊಂದು ಥಳಿಸಿರುವ ಘಟನೆ ನಡೆದಿದೆ.
ಜಿಲ್ಲೆಯ ಕೊಪ್ಪ ಹತ್ತಿರದ ಕರ್ಕೇಶ್ವರ ಗ್ರಾಮದ ಸತೀಶ್ ಎಂಬ ವ್ಯಕ್ತಿ 5 ಸಾವಿರ ರೂ. ಸಾಲ ಪಡೆದು ಮರಳಿ ತೀರಿಸದ ಹಿನ್ನೆಲೆಯಲ್ಲಿ ಯುವಕರು ಮದ್ಯಪಾನ ಮಾಡುತ್ತ ಆತನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ.
ಕೊಪ್ಪ ತಾಲೂಕಿನ ಸೋಮ್ಲಪುರ ರಸ್ತೆಯ ಪ್ಲಾಂಟೇಶನ್ನಲ್ಲಿ ಮದ್ಯಪಾನ ಮಾಡುತ್ತ, ಯುವಕರು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಘಟನೆಯಲ್ಲಿ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್, ವಿಠಲ್, ಸಿರಿಲ್, ಸುನೀಲ್, ಮಂಜು, ಕಟ್ಟೆಹಕ್ಲು ಮಂಜು ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








