ಮುಂಬಯಿ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ 39 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಾಗ್ಪುರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 33 ಜನ ಕ್ಯಾಬಿನೆಟ್ ಸಚಿವರಾಗಿ (Cabinet Minister) 6 ಜನ ರಾಜ್ಯ ಸಚಿವರಾಗಿ ಸಿಎಂ ದೇವೇಂದ್ರ ಫಡ್ನವೀಸ್ (Devendra Fadnavis) ಸಂಪುಟ ಸೇರಿದರು. ಅತಿ ದೊಡ್ಡ ಪಕ್ಷವಾದ ಬಿಜೆಪಿ (BJP) 16 ಕ್ಯಾಬಿನೆಟ್ ಸ್ಥಾನ ಪಡೆದುಕೊಂಡರೆ, ಶಿವಸೇನೆ 9, ಎನ್ಸಿಪಿ 8 ಸ್ಥಾನ ಪಡೆದುಕೊಂಡಿದೆ. ಬಿಜೆಪಿಯ ಮೂವರು, ಶಿವಸೇನೆಯ (Shiv Sena) ಇಬ್ಬರು ಮತ್ತು ಎನ್ಸಿಪಿಯ (NCP) ಒಬ್ಬರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆದರೆ, ಖಾತೆ ಹಂಚಿಕೆಯ ಕಾರ್ಯ ಮಾತ್ರ ಇದುವರೆಗೂ ನಡೆದಿಲ್ಲ. ಡಿ.5 ರಂದು ದೇವೇಂದ್ರ ಫಡ್ನವೀಸ್ (Devendra Fadnavis) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಮಾಜಿ ಸಿಎಂ ಏಕನಾಥ್ ಶಿಂಧೆ ಮತ್ತು ಎನ್ ಸಿಪಿ ನಾಯಕ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ ಜಯ ಸಾಧಿಸಿತ್ತು. ಬಿಜೆಪಿ 132, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ 57, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು.