ಶಿವರಾಜ ತಂಗಡಗಿ ಅವರಂತಹ ಪ್ರಾಮಾಣಿಕರು ಜಗತ್ತಲ್ಲಿ ಯಾರೂ ಇಲ್ಲ : ಬಿ.ಸಿ ಪಾಟೀಲ್
ಕೊಪ್ಪಳ : ಉಸ್ತುವಾರಿ ಸಚಿವರು ಬಂದು ಒಂದು ದಿನ ವಸೂಲಿ ಮಾಡ್ತಾರೆ, ಇನ್ನೊಂದು ದಿನ ಮೀಟಿಂಗ್ ಮಾಡಿ ಹೋಗ್ತಾರೆ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ಸಚಿವ ಬಿ.ಸಿ ಪಾಟೀಲ್ ಅವರು, ಶಿವರಾಜ ತಂಗಡಗಿ ಅವರಂತಹ ಸತ್ಯ ಹರಿಶ್ಚಂದ್ರ ಜಗತ್ತಿನಲ್ಲಿ ಯಾರು ಇಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಶಿವರಾಜ ತಂಗಡಗಿ ಅವರಂತಹ ಸತ್ಯ ಹರಿಶ್ಚಂದ್ರ, ಪ್ರಾಮಾಣಿಕರು ಜಗತ್ತಲ್ಲಿ ಯಾರೂ ಇಲ್ಲ. ಹೀಗಾಗಿಯೇ ಜನರು ಅವರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಮಾಜಿ ಸಚಿವ ತಂಗಡಗಿ ಈ ಹಿಂದೆ ಉಸ್ತುವಾರಿ ಸಚಿವರಿದ್ದಾಗ ಏನ್ ಮಾಡಿದ್ದಾರೋ, ಎಲ್ಲರೂ ಅದೇ ರೀತಿ ಮಾಡುತ್ತಾರೆ ಎಂದು ತಿಳಿದುಕೊಂಡಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲಾ ಹಳದಿ. ಜನ ಈಗಾಗಲೇ ಅವರಿಗೆ ಉತ್ತರ ನೀಡಿದ್ದಾರೆ ಎಂದು ತಂಗಡಗಿ ವಿರುದ್ಧ ಗುಡುಗಿದರು.
ಇದೇ ವೇಳೆ ಹೋಂ ಕ್ವಾರಂಟೈನ್ ಆಗಿದ್ದರ ಬಗ್ಗೆ ಮಾತನಾಡಿದ
ಅವರು, ಸಂಬಂಧಿಕರೊಬ್ಬರಿಗೆ ಪಾಸಿಟಿವ್ ಬಂದಿತ್ತು. ಹೀಗಾಗಿ ನಾನು ಕೂಡಾ ಕೊರೊನಾ ತಪಾಸಣೆಗೆ ಒಳಗಾಗಿ ಹೋಂ ಕ್ವಾರಂಟೈನ್ ಆಗಿದ್ದೆ. ಕೊರೊನಾ ಯಾರಿಗೆ ಬೇಕಾದರೂ ಬರಬಹುದು. ಜನರು ಜಾಗೃತಿಯಿಂದ ಇರಬೇಕು. ಸಾಮಾಜಿಕ ಜವಾಬ್ದಾರಿ ಮೂಲಕ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.








