ಬೆಂಗಳೂರು : ಇಂದು ನಾವು ನೀವೆಲ್ಲ ಸೇರಿ ಈ ದೇಶದಲ್ಲಿ ಬದಲಾವಣೆ ತರಬೇಕಾದ ಅನಿವಾರ್ಯತೆ ಇದೆ. ದೇಶಕ್ಕೆ ಶಕ್ತಿ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ನಾವೆಲ್ಲರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಪಕ್ಷಕ್ಕೆ ಹೊಸ ಚೈತನ್ಯ ತುಂಬುವುದು ಯುವಕರನ್ನು ಸೇರಿಸುವುದು, ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆಕೊಟ್ಟಿದ್ದಾರೆ.
ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಪಕ್ಷದ ನೆರಳಿನಲ್ಲಿ ನಾವೆಲ್ಲ ಬೆಳೆಯುತ್ತಿದ್ದೇವೆ. ಇವತ್ತು ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ದೊಡ್ಡ ಯುವಕರ ಪಡೆ ನಿರ್ಮಾಣ ಮಾಡಿದೆ. ರಾಹುಲ್ ಗಾಂಧಿ ಅವರು ಯುವ ನಾಯಕತ್ವ ಬೆಳೆಸಬೇಕು ಎಂಬ ದೃಷ್ಟಿಯಿಂದ ಯುವ ಕಾಂಗ್ರೆಸ್ ನಲ್ಲಿ ಚುನಾವಣೆ ಪ್ರಾರಂಭಿಸುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯತ್ ನಿಂದ ಸಂಸತ್ತಿನವರೆಗೆ ಚುನಾವಣೆ ಮೂಲಕ ನಾಯಕರ ಆಯ್ಕೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಈ ನಾಯಕರಾಗಿ ನೀವು ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಈ ದೃಷ್ಟಿಯಿಂದ ಯುವಕರಿಗೆ ಚುನಾವಣೆಯಿಂದ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ನೀವೆಲ್ಲರೂ ಅತಿ ಹೆಚ್ಚು ಯುವಕರನ್ನು ಸದಸ್ಯರನ್ನಾಗಿ ಮಾಡಿ ನಾಯಕರಾಗಿ ಬೆಳೆಯಿರಿ, ನಮ್ಮ ನಾಯಕರಾಗಿ ಬೆಳೆಯಬೇಕು ಹಾಗೂ ದೇಶಕ್ಕೆ ಆಸ್ತಿಯಾಗಬೇಕು. ನಾನು ಕೂಡ ಯುವ ಕಾಂಗ್ರೆಸ್ ತಾಲೂಕು ಮಟ್ಟದಿಂದ ಬೆಳೆದು, ಇಂದು ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನೀವೆಲ್ಲಾ ರಾಜ್ಯದ ಮುಂದಿನ ನಾಯಕರಾಗಿ ಬೆಳೆಯಲು ಪ್ರತಿ ತಾಲೂಕಿನಲ್ಲೂ ಕನಿಷ್ಠ 5000 ಯುವಕರ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಬೇಕು. ಈ ಜವಾಬ್ದಾರಿ ನಿಮ್ಮ ಮೇಲಿದೆ ಎಂದಿದ್ದಾರೆ.