ಉಳ್ಳಾಲ ವ್ಯಾಪ್ತಿಯಲ್ಲಿ 85 ರಷ್ಟು ಪಾಸಿಟಿವ್ ಸಾಧ್ಯತೆಯಿದೆ – ಯು.ಟಿ. ಖಾದರ್
ಮಂಗಳೂರು, ಜುಲೈ 4: ಮಂಗಳೂರಿನ ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಹಾವಳಿಗೆ ಜನರು ತತ್ತರಿಸಿಹೋಗಿದ್ದು, ಮಾಜಿ ಸಚಿವ ಯು.ಟಿ. ಖಾದರ್ ಅವರು ಉಳ್ಳಾಲ ವ್ಯಾಪ್ತಿಯಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲು ಸೂಚನೆ ನೀಡಿದ್ದರು. ಶಾಸಕರ ಸೂಚನೆಯಂತೆ ರ್ಯಾಂಡಮ್ ಟೆಸ್ಟ್ ಮಾಡಿದಾಗ ಬಹುತೇಕ ಜನರಿಗೆ ಕೊರೋನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಯು.ಟಿ ಖಾದರ್ ಅವರು ಪ್ರತಿಕ್ರಿಯಿಸಿದ್ದು, ಉಳ್ಳಾಲ ವ್ಯಾಪ್ತಿಯಲ್ಲಿ 400 ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದ್ದು, 85 ರಷ್ಟು ಪಾಸಿಟಿವ್ ಸಾಧ್ಯತೆಯಿದೆ ಎಂದು ಹೇಳಿದರು. ಕೊರೊನಾ ಸೋಂಕು ಹರಡದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು ಕೊರೊನಾ ಸೋಂಕು ಪೀಡಿತರು ಗಾಬರಿಯಾಗದಿರಿ. ಸಾಮಾಜಿಕ ಅಂತರ ಕಾಯ್ದುಕೊಂಡು ವೈದ್ಯರು ಸೂಚಿಸುವ ಸಲಹೆ ಸೂಚನೆಗಳನ್ನು ಪಾಲಿಸುವುದರಿಂದ ಬೇಗನೆ ಗುಣಮುಖರಾಗಬಹುದು ಎಂದರು. ರ್ಯಾಂಡಂ ಟೆಸ್ಟ್ ಮಾಡದೇ ಇರುವ ಪ್ರದೇಶಗಳಲ್ಲಿ ಮರಣ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ. ಔಟ್ ಬ್ರೇಕ್ ತಪ್ಪಿಸುವ ಸಲುವಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಧರ್ಮೀಯರು, ವರ್ತಕರು, ರಿಕ್ಷಾ ಚಾಲಕರು ಸ್ವಯಂ ಪ್ರೇರಿತ ಬಂದ್ ನಡೆಸುವುದರ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕೊರೊನಾ ಜಾಗೃತಿ ಮಾಹಿತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವ ಚಿಂತನೆ ನಡೆಸಿದ್ದೇವೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.








