ಬೆಂಗಳೂರು: ಕಳೆದ ಫೆಬ್ರವರಿ 20ರಂದು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಮಾಡಿದ್ದ ಅಮೂಲ್ಯ ಲಿಯೋನಾಗೆ ಜಾಮೀನು ನೀಡಲು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿರಾಕರಿಸಿದೆ.
ಅಮೂಲ್ಯ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದಾಳೆ. ಸದ್ಯದ ಪರಿಸ್ಥಿತಿಯಲ್ಲಿ ಅಮೂಲ್ಯಾಗೆ ಜಾಮೀನು ನೀಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ. ಜೊತೆಗೆ ಆಕೆಗೆ ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಎಲ್ಲ ಸಾಧ್ಯತೆ ಇದೆ. ಹೀಗಾಗಿ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರಾದ ವಿದ್ಯಾಧರ ಶಿರಹಟ್ಟಿ ತಿಳಿಸಿದ್ದಾರೆ.
ಅಮೂಲ್ಯ ಮೇಲಿರುವ ದೇಶದ್ರೋಹ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಜೊತೆಗೆ ತನಿಖಾಧಿಕಾರಿ ಕೂಡ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಾಮೀನು ನೀಡಲು ಆಗುವುದಿಲ್ಲ. ಅರ್ಜಿದಾರಳಾದ ಅಮೂಲ್ಯ ಆದಷ್ಟು ಬೇಗ ಪೂರ್ಣಪ್ರಮಾಣದ ವಾದ-ಪ್ರತಿವಾದ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಳೆ. ಇಂತಹ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ಆರೋಪಿ ತಲೆ ಮರೆಸಿಕೊಳ್ಳುವ ಸಾಧ್ಯತೆ ಇದ್ದು, ಆಕೆ ಮತ್ತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಫೆಬ್ರಬರಿ 20ರಂದು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಸಿಎಎ, ಎನ್‍ಆರ್‍ಸಿ ಕಾಯ್ದೆ ವಿರೋಧಿಸಿ ಸಮಾವೇಶ ನಡೆಯುತ್ತಿತ್ತು. ಈ ವೇಳೆ ಭಾಷಣೆ ಮಾಡುತ್ತಿದ್ದ ಅಮೂಲ್ಯ ಲಿಯೋನಾ, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಳು. ಪೊಲೀಸರು ಕೂಡಲೇ ವಶಕ್ಕೆ ಪಡೆಯುತ್ತಿದ್ದಂತೆ ಹಿಂದುಸ್ತಾನ್ ಜಿಂದಾಬಾದ್ ಎಂದಿದ್ದಳು. ಆದರೂ, ಸ್ಥಳದಲ್ಲಿದ್ದ ಪೊಲೀಸರು ಅಮೂಲ್ಯಾಳನ್ನು ವಶಕ್ಕೆ ಪಡೆದು ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿದ್ದರು. ನಂತರ ಅಮೂಲ್ಯ ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಕೋರ್ಟ್ ನಿರಾಕರಿಸಿತ್ತು. ಸದ್ಯ ಅಮೂಲ್ಯ ಲಿಯೋನಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.