ಬೆಂಗಳೂರು : ಪ್ರಶಾಂತ್ ನೀಲ್, ಸದ್ಯ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ಹೆಸರು. ಕೇವಲ ಒಂದು ಸಿನಿಮಾದ ಮೂಲಕ ಭಾರತೀಯ ಚಿತ್ರರಂಗವನ್ನೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿರುವ ಹೆಮ್ಮೆಯ ಕನ್ನಡಿಗ ಪ್ರಶಾಂತ್ ನೀಲ್ ಕೆಜಿಎಫ್-2 ಸಿನಿಮಾ ಬಳಿಕ ಟಾಲಿವುಡ್ ಯಂಗ್ ಟೈಗರ್ ಎನ್ ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
ಈ ಕಾರಣಕ್ಕಾಗಿ ಪ್ರಶಾಂತ್ ನೀಲ್ ಸದ್ಯ ಟಾಲಿವುಡ್ ನ ಟಾಕ್ ಆಪ್ ದಿ ಟೌನ್. ಟಾಲಿವುಡ್ ನ ಗಲ್ಲಿ ಗಲ್ಲಿಯಲ್ಲೂ ಪ್ರಶಾಂತ್ ನೀಲ್ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಲ್ಲೂ ಎನ್ ಟಿಆರ್ ಬರ್ತ್ ಡೇ ಗೆ ಪ್ರಶಾಂತ್ ವಿಶ್ ಮಾಡುತ್ತಿದ್ದಂತೆ ಕೆಜಿಎಫ್-2 ಸಿನಿಮಾದ ಬಳಿಕ ನೀಲ್, ಎನ್ ಟಿಆರ್ ಜೊತೆಗೆ ತೆಲುಗು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈ ಸುದ್ದಿಯಾದ ನಂತರ ಪ್ರಶಾಂತ್ ನೀಲ್ ಅವರನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಜೊತೆಗೆ ಇಲ್ಲಿ ಹುಟ್ಟಿ ಇಲ್ಲಿ ಬೆಳೆದು ನಂತರ ಬೇರೆ ಭಾಷೆಯ ಸಿನಿಮಾ ಮಾಡಲು ಹೋಗಬಾರದು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಉಗ್ರಂ ಮತ್ತು ಕೆಜಿಎಫ್ ಚಿತ್ರಗಳು ಹಿಟ್ ಆಗಿದ್ದು, ನಮ್ಮ ಕರ್ನಾಟಕದಲ್ಲಿ ಇನ್ನು ಮುಂದೆ ಪ್ರಶಾಂತ್ ನೀಲ್ ಅವರು ಕನ್ನಡ ಸಿನಿಮಾವನ್ನೇ ನಿರ್ದೇಶನ ಮಾಡಬೇಕು ಎಂದು ಕನ್ನಡ ಚಿತ್ರರಸಿಕರು ಆಗ್ರಹಿಸಿದ್ದರು.
ಈ ಎಲ್ಲಾ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಆಗುತ್ತಿದ್ದಂತೆ ಸ್ವತಃ ನೀಲ್ ಅವರೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾನು ಮುಂದೆ ಮಾಡುವ ಎಲ್ಲ ಸಿನಿಮಾಗಳು ಕನ್ನಡ ಚಿತ್ರಗಳೇ ಆಗಿರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
“ನನಗೆ ಕೆಲಸ ಮತ್ತು ಅನ್ನ ನೀಡಿರುವುದು ಕನ್ನಡಿಗರು. ಹಾಗಾಗಿ ನನ್ನ ಡಿಎನ್ ಎಯಲ್ಲೂ ಕನ್ನಡವಿದೆ. ಈಗ ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ನಿರತನಾಗಿದ್ದೇನೆ. ನಾನು ಮುಂದೆ ಮಾಡುವ ಎಲ್ಲಾ ಸಿನಿಮಾಗಳು ಕನ್ನಡ ಚಿತ್ರಗಳೇ ಆಗಿರಲಿವೆ ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.
ಎನ್ ಟಿಆರ್ ಹುಟ್ಟುಹಬ್ಬಕ್ಕೆ ಟ್ವೀಟ್ ಮೂಲಕ ವಿಶ್ ಮಾಡಿದ್ದ ಪ್ರಶಾಂತ್ ನೀಲ್, ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದಲ್ಲಿ ಕುಳಿತರೆ ಹೇಗಿರುತ್ತದೆ ಎಂಬುದನ್ನು ನಾನು ಅಂತಿಮವಾಗಿ ತಿಳಿದೆ. ಮುಂದಿನ ಸಲ ಕ್ರೇಜಿ ಎನರ್ಜಿಗೆ ನನ್ನ ರೇಡಿಯೇಶನ್ ಸೂಟ್ ತರುತ್ತೇನೆ. ಅಲ್ಲದೆ ಹ್ಯಾಪಿ ಬರ್ತ್ ಡೇ ಬ್ರದರ್ ಹ್ಯಾವ್ ಎ ಸೇಫ್ ಅಂಡ್ ಗ್ರೇಟ್ ಡೇ, ಸೀ ಯು ಸೂನ್ ಎಂದು ಬರೆದು. ಹ್ಯಾಶ್ ಟ್ಯಾಗ್ ನೊಂದಿಗೆ ಹ್ಯಾಪಿ ಬರ್ತ್ ಡೇ ಎನ್ ಟಿಆರ್, ಸ್ಟೇ ಹೋಮ್ ಸ್ಟೇ ಸೇಫ್ ಎಂದು ಬರೆದುಕೊಂಡಿದ್ದರು.








