ವಿಧಾನಸಭಾ ಚುನಾವಣೆ ಪೂರ್ವ ಯಾವುದೇ ಮೈತ್ರಿ ಇಲ್ಲ : ಹೆಚ್ ಡಿ ದೇವೇಗೌಡ- Saaksha Tv
ಬೆಂಗಳೂರು : ಮುಂಬರುವ ವಿಧಾನಸಭಾಚುನಾವಣೆ ಪೂರ್ವ ಯಾವುದೇ ಮೈತ್ರಿ ಇಲ್ಲ, ನಾವು ಏಕಾಂಗಿಯಾಗಿ ಹೋರಾಡುತ್ತೇವೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ್ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಪಕ್ಷಗಳ ವಿರುದ್ಧ ನಾವು ನಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತೇವೆ. ಹತ್ತುವರೆ ತಿಂಗಳು ಈ ದೇಶವನ್ನು ಆಳಿದ್ದೇನೆ. ಪಕ್ಷದ ಮುಖಂಡರು, ಶಾಸಕರು ಎಲ್ಲಾ ಸೇರಿ ಕೆಲಸ ಮಾಡಬೇಕು.
ಅಲ್ಲದೇ ಇದೇ ತಿಂಗಳು 20 ರಂದು ಎಲ್ಲರನ್ನು ಕರೆದು ಸಭೆ ನಡೆಸಲು ನಿರ್ಧಾರಿಸಲಾಗಿದೆ. ಈ ಸಭೆಯಲ್ಲಿ ಹೋರಾಟದ ಕುರಿತು ಕಾರ್ಯಕ್ರಮ ರೂಪಿಸುತ್ತೇವೆ. ಈ ವೇಳೆ ಎಲ್ಲರಿಗೂ ಒಂದಿಷ್ಟು ಜವಬ್ದಾರಿ ಕೊಡಲಾಗುತ್ತದೆ. ಆ ಮೂಲಕ ಮುಂಬರುವ ಚುನಾವಣೆಗಳು ಹಾಗೂ ಪಕ್ಷ ಬಲವರ್ಧನೆಗೆ ಒತ್ತು ನೀಡಲಾಗುತ್ತದೆ. ಒಂದೆರಡು ಜಿಲ್ಲೆಗೆ ಒಂದು ಸಭೆ ಮಾಡುತ್ತೇವೆ. ಈ ಪಕ್ಷ ಉಳಿಸುವ ಕೆಲಸ ಮಾಡುತ್ತೇವೆ ಹೇಳಿದರು.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಅವರು, ಐದು ರಾಜ್ಯಗಳ ಚುನಾವಣೆ ಫಲಿತಾಂಶ ಎಲ್ಲರಿಗೂ ಗೊತ್ತಾಗಿದೆ. ನಾನು ಅದನ್ನ ಮತ್ತೆ ಬಿಡಿಸಿ ಹೇಳಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಲ್ಕು ದಿಕ್ಕಿನಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಹಂಬಲಿಸುತ್ತಿದ್ದಾರೆ. ಅವರ ಈ ಕಾರ್ಯವನ್ನ ನಾವು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಸಿ ಎಂ ಇಬ್ರಾಹಿಂ ಅವರು ನಮ್ಮ ಪಕ್ಷಕ್ಕೆ ಸೇರುವ ವಿಚಾರದ ಕುರಿತು ಹಲವಾರು ತಿಂಗಳಿನಿಂದ ಚರ್ಚೆ ನಡೆಯುತ್ತಿದೆ. ಆದರೆ, ನನ್ನ ಬಳಿ ಬಂದು ಅವರು ಪಕ್ಷ ಸೇರುವ ಬಗ್ಗೆ ಚರ್ಚ ಮಾಡಿಲ್ಲ. ಕಾಂಗ್ರೆಸ್ನವರು ಅವರಿಗೆ ಸಾಕಷ್ಟು ಪೆಟ್ಟು ಕೊಟ್ಟರು. ಆ ನೋವು ಅವರಿಗೆ ಇದೆ. ಎಲ್ಲಾ ಮುಖಂಡರ ಜೊತೆ ಚರ್ಚೆ ಮಾಡಿ ಸಿಎಂ ಇಬ್ರಾಹಿಂ ಪಕ್ಷ ಸೇರುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.








