ಬೆಂಗಳೂರು : ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲ, ಹೀಗಾಗಿ ನಾನು ಶಾಸಕರ ಜೊತೆ ಮಾತನಾಡುವ ಪ್ರಶ್ನೆಯೂ ಉದ್ಭವಿಸಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ರಾಜ್ಯಸಭೆ ಕೋಲಾಹಲ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಿವಾಸದಲ್ಲಿ ಮಾತನಾಡಿದ ಅವರು, ಸದ್ಯ ಸರ್ಕಾರದ ಮುಂದಿರುವ ಸವಾಲು ಕೊರೊನಾ ವಿರುದ್ಧ ಹೋರಾಟ ಮಾಡೋದಾಗಿದೆ. ಜನರು ಸಮಸ್ಯೆಯಲ್ಲಿ ನರಳುತ್ತಿರುವಾಗ ನಮ್ಮ ಆಲೋಚನೆ ಕೊರೊನಾ ವಿರುದ್ಧ ಹೋರಾಟ ಮಾಡುವುದೇ ಆಗಿದೆ. ಉತ್ತರ ಕರ್ನಾಟಕ ಭಾಗದ ಶಾಸಕರು ಸಭೆ ಸೇರಿದ್ದರ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಆದರೆ ಅಸಮಾಧಾನದಿಂದ ಸೇರಿಲ್ಲ ಅಂತ ಸ್ವತಃ ಶಾಸಕರೇ ಹೇಳಿದ್ದಾರೆ. ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನಾನು ಅವರ ಜತೆ ಮಾತನಾಡುವ ಅಗತ್ಯವೇ ಇಲ್ಲ. ರಾಜಕೀಯ ಚರ್ಚೆ ಆಗಿಲ್ಲ ಅಂದಾಗ ನಾನು ಮಾತನಾಡುವ ಸನ್ನಿವೇಶವೇ ಬರೋದಿಲ್ಲ ಎಂದರು.
ಇನ್ನು ನಾವೆಲ್ಲರೂ ಸಿಎಂ ಜತೆಗಿದ್ದೇವೆ. ಕೊರೊನಾ ವಿರುದ್ಧ ಹೋರಾಟ ಮಾಡೋದು ಮಾತ್ರ ನಮ್ಮ ಮುಂದಿರುವ ಗುರಿ. ನಿನ್ನೆ ರಾತ್ರಿ ಸಭೆ ಸೇರಿದ್ದ ಕೆಲ ಶಾಸಕರೂ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಾವ್ಯಾರು ರಾಜಕೀಯ ಮತನಾಡಿಲ್ಲ ಎಂದೂ ಹೇಳಿದ್ದಾರೆ. ಹಾಗಾಗಿ ನಮ್ಮಲ್ಲಿ ಭಿನ್ನಮತ ಇದೆ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.