ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಮೇ3 ರವರೆಗೂ ಲಾಕ್ ಡೌನ್ ಮುಂದುವರೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ರಾಜ್ಯದಲ್ಲಿ ಏಪ್ರಿಲ್ 21ರ ನಂತ್ರ ಲಾಕ್ ಡೌನ್ ಸಡಿಲಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ರಾಜ್ಯದಲ್ಲಿ ಲಾಕ್ ಡೌನ್ ಸಡಲಿಕೆಯನ್ನು ಸರ್ಕಾರ ಕೈ ಬಿಟ್ಟಿದೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಮಾಧುಸ್ವಾಮಿ ಮೇ 3ರವರೆಗೂ ರಾಜ್ಯದಲ್ಲಿ ಇದೇ ಸ್ಥಿತಿ ಮುಂದುವರೆಯುತ್ತೆ ಎಂದರು.
ಆದರೆ, ಮುಂದಿನ ಎರಡು ಮೂರು ದಿನಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡಬೇಕಾ, ಬೇಡವಾ ಅನ್ನೋದನ್ನು ಮುಖ್ಯಕಾರ್ಯದರ್ಶಿಗಳ ಜೊತೆ ಮುಖ್ಯಮಂತ್ರಿ ಚರ್ಚಿಸಿ ತೀರ್ಮಾನ ಮಾಡುತ್ತಾರೆ.ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಸಡಿಲಿಕೆಯಾದರೆ ಟಾಸ್ಕ್ ಪೋರ್ಸ್ ನಲ್ಲಿ ಪರಶೀಲಿಸಲಾಗುವುದು. ಕೃಷಿ ವಲಯಕ್ಕಿರುವ ವಿನಾಯಿತಿ ಮುಂದುವರೆಯಲಿದೆ. ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಗಲಭೆಕೋರರನ್ನು ಮಟ್ಟಹಾಕಲು ಬರುತ್ತಿದೆ ಸುಗ್ರೀವಾಜ್ಞೆ
ಇವತ್ತಿನ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಯೊಂದನ್ನು ಜಾರಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗಗಳ ಅಧಿನಿಯಮ ಹೆಸರಿನಲ್ಲಿ ಇನ್ನೆರಡು ದಿನದೊಳಗೆ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಕೇರಳ ಹಾಗೂ ಉತ್ತರಪ್ರದೇಶದಲ್ಲಿ ಈಗಾಗಲೇ ಜಾರಿಗೆ ತರಲಾಗಿರುವ ಕಾಯಿದೆಯ ರೀತಿಯಲ್ಲಿಯೇ ರಾಜ್ಯದಲ್ಲಿಯು ಸಾಂಕ್ರಾಮಿಕ ಕಾಯಿದೆ ಅಧಿನಿಯಮ ಜಾರಿಗೆ ಪ್ರಯತ್ನಸಲಾಗುತ್ತಿದೆ. ಈ ಕಾಯಿದೆ ಸುಗ್ರೀವಾಜ್ಞೆಯ ಮೂಲಕ ಹೊರಬಂದ ಪಕ್ಷದಲ್ಲಿ, ಗಲಭೆಕೋರರಿಗೆ 2 ವರ್ಷ ಶಿಕ್ಷೆ ವಿಧಿಸುವ ಹಾಗೂ ಆಸ್ತಿಪಾಸ್ತಿ ಮುಟ್ಟುಗೋಲು ಹಾಕುವ ಅವಕಾಶ ಕಾನೂನು ಬದ್ಧ ಸಂಸ್ಥೆಗಳಿಗೆ ಸಿಗಲಿದೆ.








