ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವವರು ತಮ್ಮ ಆಸ್ತಿಯ ಇ-ಖಾತಾ ಅಥವಾ ಇ-ಸ್ವತ್ತು (E-Swathu) ಪಡೆಯಲು ಹೊಸ ಮಾರ್ಗಸೂಚಿ ಪ್ರಕಟವಾಗಿದ್ದು, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಇದೇ ವೇಳೆ ಆಸ್ತಿ ನೋಂದಣಿಗೆ ಅಗತ್ಯವಿರುವ ದಾಖಲೆಗಳ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ.
ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ಹೆಚ್ಚಿಸುವ ಮತ್ತು ಆಸ್ತಿ ಮಾಲೀಕರಿಗೆ ಕಾನೂನುಬದ್ಧ ಹಕ್ಕು ನೀಡುವ ಉದ್ದೇಶದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ-ಸ್ವತ್ತು 2.0 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ.
ಅಕ್ರಮ ಲೇಔಟ್ ಆಸ್ತಿಗಳಿಗೂ ಸಿಗಲಿದೆ ಮುಕ್ತಿ
ಗ್ರಾಮಠಾಣಗಳ ಹೊರಗೆ ಭೂಪರಿವರ್ತನೆ ಮಾಡಿಸದೆ, ಮನೆ ನಿರ್ಮಿಸಿಕೊಂಡು ನೆಲೆಸಿರುವ ಜನರಿಗೆ ಈ ಯೋಜನೆಯಿಂದ ಭಾರೀ ಅನುಕೂಲವಾಗಲಿದೆ. ಈಗಾಗಲೇ ಇಂತಹ ಬಡಾವಣೆಗಳಿಗೆ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ ಮುಂತಾದ ಮೂಲಸೌಕರ್ಯಗಳನ್ನು ಪಂಚಾಯತಿಗಳು ಒದಗಿಸುತ್ತಿವೆ. ಆದರೆ ತೆರಿಗೆ ಸಂಗ್ರಹವಾಗದ ಕಾರಣ ಗ್ರಾಮ ಪಂಚಾಯತಿಗಳಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿತ್ತು.
ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ರ ಪ್ರಕರಣ 199ಕ್ಕೆ ತಿದ್ದುಪಡಿ ತಂದಿದೆ. ಪ್ರಕರಣ 199ಬಿ ಮತ್ತು 199ಸಿ ಸೇರಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ಹೊಸ ಆಸ್ತಿಗಳ ತೆರಿಗೆ ವ್ಯಾಪ್ತಿ, ತೆರಿಗೆ ನಿರ್ಧರಣಾ ವಿಧಾನ ಮತ್ತು ಬಡಾವಣೆಗಳ ಅನುಮೋದನೆಗೆ ಕ್ರಮಗಳನ್ನು ರೂಪಿಸಲಾಗಿದೆ.
ಕೇವಲ 15 ದಿನಗಳಲ್ಲಿ ಇ ಸ್ವತ್ತು ವಿತರಣೆ
ಗ್ರಾಮೀಣ ಜನತೆಗೆ ಅಲೆದಾಟ ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇ-ಸ್ವತ್ತು ನಮೂನೆ (ಫಾರಂ-9 ಮತ್ತು ಫಾರಂ-11) ವಿತರಿಸಲು ಈ ಹಿಂದೆ ನಿಗದಿಪಡಿಸಲಾಗಿದ್ದ 45 ದಿನಗಳ ಕಾಲಾವಧಿಯನ್ನು ಕೇವಲ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ತ್ವರಿತವಾಗಿ ತಮ್ಮ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ.
ಇ ಸ್ವತ್ತು ಪಡೆಯಲು ಸಲ್ಲಿಸಬೇಕಾದ 12 ಕಡ್ಡಾಯ ದಾಖಲೆಗಳು
ನೀವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿನ ದಾಖಲೆಗಳನ್ನು ಸಿದ್ಧಿಟ್ಟುಕೊಳ್ಳುವುದು ಅನಿವಾರ್ಯವಾಗಿದೆ:
1. ಋಣಭಾರ ಪ್ರಮಾಣ ಪತ್ರ (Encumbrance Certificate – ನಮೂನೆ 15).
2. ಆಸ್ತಿಯ ಮೂಲ ದಾಖಲೆಗಳು (ಸೇಲ್ ಡೀಡ್, ಸ್ವತ್ತಿನ ಕಾರ್ಡ್, ಪಿತ್ರಾರ್ಜಿತ ಆಸ್ತಿ ಪತ್ರ, ಆಸ್ತಿ ವಿಭಜನೆ ಪತ್ರ, ಗಿಫ್ಟ್ ಡೀಡ್, ವಿಲ್, ಹಕ್ಕುಪತ್ರ, ರಿಲೀಜ್ ಡೀಡ್, ಅಥವಾ ನ್ಯಾಯಾಲಯದ ಆದೇಶ ಪ್ರತಿ).
3. ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ನೀಡಿದ ಹಕ್ಕುಪತ್ರ.
4. ಭೂ ಪರಿವರ್ತನೆ (Land Conversion) ಮಾಡಿಸಿದ ದಾಖಲಾತಿಗಳು.
5. ಅನುಮೋದಿತ ಬಡಾವಣೆ ನಕ್ಷೆ ಅಥವಾ ಏಕನಿವೇಶನ ನಕ್ಷೆ (ಭೂ ಪರಿವರ್ತನೆಯಾದ ಜಾಗಕ್ಕೆ).
6. ಅಕ್ರಮ ಸಕ್ರಮ ಯೋಜನೆಯಡಿ (ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಸೆಕ್ಷನ್ 94ಸಿ ಅಡಿ) ವಿತರಿಸಿದ ಹಕ್ಕು ಪತ್ರವಿದ್ದರೆ ಅದು.
7. ನಿವೇಶನದಲ್ಲಿ ಕಟ್ಟಡವಿದ್ದರೆ ವಿದ್ಯುತ್ ಬಿಲ್ ಪಾವತಿಸಿದ ರಸೀದಿ.
8. ಕಂದಾಯ ಪಾವತಿ ಮಾಡಿದ ರಸೀದಿ.
9. ಗುರುತಿನ ಚೀಟಿ (ಆಧಾರ್ ಕಾರ್ಡ್ ಹೊರತುಪಡಿಸಿ ವೋಟರ್ ಐಡಿ, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್).
10. ಆಸ್ತಿಯು ಮಾಲೀಕರ ಸ್ವಾಧೀನದಲ್ಲಿದೆ ಎಂದು ದೃಢೀಕರಿಸಲು ಆಸ್ತಿಯ ಮುಂದೆ ನಿಂತು ತೆಗೆಸಿದ ಮಾಲೀಕರ ಛಾಯಾಚಿತ್ರ.
11. ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.
12. ಪೌತಿ ಖಾತೆ ಬದಲಾವಣೆಯಾಗಿದ್ದಲ್ಲಿ ವಂಶವೃಕ್ಷ ಹಾಗೂ ಮರಣ ಪ್ರಮಾಣ ಪತ್ರ.
ಈ ಎಲ್ಲಾ ದಾಖಲೆಗಳೊಂದಿಗೆ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಅಥವಾ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ 15 ದಿನಗಳ ಒಳಗೆ ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"remove":1},"is_sticker":false,"edited_since_last_sticker_save":true,"containsFTESticker":false}](https://saakshatv.com/wp-content/uploads/2025/12/Picsart_25-12-03_20-36-40-455-750x422.jpg)







