ಟೀಮ್ ಇಂಡಿಯಾ ವಿರುದ್ಧ ಆಡುವ ಮೂಲಕ ಕ್ರಿಕೆಟ್ ಬದುಕಿಗೆ ವಿದಾಯದ ಸಹಿ ಹಾಕಿದ ಅಪ್ರತಿಮ ಆಟಗಾರರು ಇವ್ರೇ…!
ಪ್ರತಿಯೊಬ್ಬ ಕ್ರಿಕೆಟಿಗನಿಗೂ ವಿದಾಯ ಘೋಷಣೆ ಮಾಡಿದಾಗ ಆಗುವ ನೋವು, ಸಂಕಟ, ವೇದನೆ, ಬೇಸರ ಅಷ್ಟಿಷ್ಟಲ್ಲ. ಬದುಕನ್ನು ರೂಪಿಸಿದ ಆಟ, ಒಡನಾಡಿನ ಸ್ಹೇಹ, ಅಭಿಮಾನಿಗ¼ ಪ್ರೀತಿ, ಸೋಲು, ಗೆಲುವಿನ ಆ ಕ್ಷಣಗಳನ್ನು ಬಿಟ್ಟು ಮೈದಾನದಿಂದ ಹೊರನಡೆಯುವಾಗ ತಮಗೆ ಗೊತ್ತಿಲ್ಲದ ಹಾಗೇ ಕಣ್ಣೀರಿನ ಧಾರೆ ಹರಿಯುತ್ತದೆ.
ಹಾಗೇ ವಿದಾಯ ಪಂದ್ಯದ ಗೌರವ ಕೂಡ ಹೆಚ್ಚಿನ ಕ್ರಿಕೆಟಿಗರಿಗೆ ಸಿಗುವುದಿಲ್ಲ. ಅದ್ರಲ್ಲೂ ಕೆಲವು ಕ್ರಿಕೆಟ್ ದಿಗ್ಗಜರು ಸುದ್ದಿಗೋಷ್ಠಿಯಲ್ಲಿಯೇ ವಿದಾಯ ಹೇಳಿರುವ ನಿದರ್ಶನಗಳಿವೆ. ಇನ್ನು ಕೆಲವು ಕ್ರಿಕೆಟಿಗರಿಗೆ ಎಂದೂ ಮರೆಯಲಾಗದ ವಿದಾಯದ ಪಂದ್ಯವೂ ಸಿಕ್ಕಿದೆ. ಅದೇ ರೀತಿ ಭಾರತದ ವಿರುದ್ಧ ವಿದಾಯದ ಪಂದ್ಯವನ್ನಾಡಿದ ವಿಶ್ವದ ಶ್ರೇಷ್ಠ ಕ್ರಿಕೆಟಿಗರ ಸಾಲಿಗೆ ಇಂಗ್ಲೆಂಡ್ನ ಆರಂಭಿಕ ಆಲೆಸ್ಟರ್ ಕುಕ್ ಕೂಡ ಸೇರಿಕೊಂಡಿದ್ದಾರೆ. ಆಲೆಸ್ಟರ್ ಕುಕ್ ಅವರಿಗಿಂತ ಮುನ್ನ ವಿದಾಯ ಹೇಳಿರುವ ನಾಲ್ವರು ಶ್ರೇಷ್ಠ ಟೆಸ್ಟ್ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
ಸ್ಟೀವ್ ವಾ – ಆಸ್ಟ್ರೇಲಿಯಾ ಕ್ರಿಕೆಟ್ನ ಎವರ್ ಗ್ರೀನ್ ಕ್ಯಾಪ್ಟನ್. 1990-2000ನೇ ಸಾಲಿನ ಆರಂಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ನ ಆಧಾರಸ್ತಂಭವಾಗಿದ್ದ ಸ್ಟೀವ್ ಅದ್ಭುತ ಆಟಗಾರ. ಅದ್ಭುತ ನಾಯಕ. ತಂಡವನ್ನು ವಿಶ್ಚ ಚಾಂಪಿಯನ್ಪಟ್ಟದಲ್ಲಿ ಕೂರಿಸಿದ್ದ ಸ್ಟೀವ್ ವಾ ಟೆಸ್ಟ್ ಕ್ರಿಕೆಟ್ನಲ್ಲಿ 10,827 ರನ್ ಕಲೆ ಹಾಕಿದ್ದಾರೆ. 168 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟೀವ್ ಆಲ್ರೌಂಡರ್ ಕೂಡ ಆಗಿದ್ದರು.
2004, ಜನವರಿ 2ರಿಂದ 6ರವರೆಗೆ ಭಾರತ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯ ಸ್ಟೀವ್ ವಾ ಅವರ ಕ್ರಿಕೆಟ್ ವೃತ್ತಿ ಬದುಕಿನ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸ್ಟೀವ್ ವಾ ಎರಡು ಇನಿಂಗ್ಸ್ ಗಳಲ್ಲಿ ತಲಾ 40 ಮತ್ತು 80 ರನ್ ಸಿಡಿಸಿದ್ದರು.
ಆಡಂ ಗಿಲ್ಕ್ರಿಸ್ಟ್ – ಆಸ್ಟೇಲಿಯಾದ ಮೊತ್ತಬ್ಬ ಕ್ರಿಕೆಟ್ ದಂತಕಥೆ. ವಿಕೆಟ್ ಕೀಪರ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಆರಂಭಿಕ ಆಟಗಾರನಾಗಿದ್ದ ಗಿಲ್ಕ್ರಿಸ್ಟ್ ವಿಶ್ವ ಕ್ರಿಕೆಟ್ನ ಸ್ಮೈಲಿಂಗ್ ಕಿಲ್ಲರ್. ಎಡಗೈ ಬ್ಯಾಟ್ಸ್ಮೆನ್ ಆಗಿದ್ದ ಆಡಂ ಗಿಲ್ಕ್ರಿಸ್ಟ್ ಅವರು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿದ್ದ ದಾಖಲೆಗಳು ಕೂಡ ಇವೆ.
ಗೂಟ ರಕ್ಷಕನಾಗಿ ಹಲವು ದಾಖಲೆಗಳನ್ನು ಬರೆದಿರುವ ಗಿಲ್ಲಿ, 96 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 5750 ರನ್ ಕೂಡ ಕಲೆ ಹಾಕಿದ್ದಾರೆ. ಗಿಲ್ ಕ್ರಿಸ್ಟ್ ಕೂಡ ತನ್ನ ಕ್ರಿಕೆಟ್ ಬದುಕಿನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದು ಭಾರತದ ವಿರುದ್ಧವೇ. 2008 ಜನವರಿ 24ರಿಂದ 28ರವರೆಗೆ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಕೇವಲ 14 ರನ್ಗಳಿಸಿ ತನ್ನ ಪ್ಯಾಡ್ ಹಾಗೂ ಗ್ಲೌಸ್ ಕಳಚಿಟ್ಟಿದ್ದರು.
ಜಾಕ್ ಕ್ಯಾಲಿಸ್ – ದಕ್ಷಿಣ ಆಫ್ರಿಕಾದ ಆಲ್ರೌಂಡರ್. ವೇಗದ ಬೌಲಿಂಗ್ ಜೊತೆ ಸ್ಥಿರ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳನ್ನು ಕಾಡಿದ್ದ ಆಟಗಾರ ಜಾಕ್ ಕ್ಯಾಲಿಸ್. ಟೆಸ್ಟ್ ಕ್ರಿಕೆಟ್ನಲ್ಲಿ 166 ಪಂದ್ಯಗಳನ್ನಾಡಿರುವ ಕ್ಯಾಲಿಸ್ 13, 289 ರನ್ ಕೂಡ ಕಲೆ ಹಾಕಿದ್ದಾರೆ.
ಅಲ್ಲದೆ 292 ವಿಕೆಟ್ಗಳನ್ನು ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹತ್ತು ಸಾವಿರಕ್ಕೂ ಅಧಿಕ ರನ್ ಹಾಗೂ 250ಕ್ಕೂ ಹೆಚ್ಚು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಕ್ಯಾಲಿಸ್ ಪಾತ್ರರಾಗಿದ್ದಾರೆ.ಜಾಕ್ ಕ್ಯಾಲಿಸ್ ಕೂಡ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದು ಭಾರತದ ವಿರುದ್ಧವೇ. 2013, ಡಿಸೆಂಬರ್ 26ರಿಂದ 30ರವರೆಗೆ ನಡೆದ್ದಿದ್ದ ಡರ್ಬಾನ್ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸುವ ಮೂಲಕ ಅರ್ಥಪೂರ್ಣವಾದ ವಿದಾಯವನ್ನೇ ಹೇಳಿದ್ದರು. ಜಾಕ್ ಕ್ಯಾಲಿಸ್ ಅವರು 45 ಅರ್ಧಶತಕ, ಎರಡು ದ್ವಿಶತಕ ಹಾಗೂ 58 ಅರ್ಧಶತಕಗಳನ್ನು ದಾಖಲಿಸಿದ್ದರು.
ಕುಮಾರ ಸಂಗಕ್ಕರ – ವಿಕೆಟ್ ಕೀಪರ್, ಆರಂಭಿಕ ಬ್ಯಾಟ್ಸ್ಮೆನ್ ಹಾಗೂ ನಾಯಕನಾಗಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಕ್ರಿಕೆಟಿಗ. ಕುಮಾರ ಸಂಗಕ್ಕರ ಕೂಡ ತನ್ನ ಕ್ರಿಕೆಟ್ ಬದುಕಿನ ಕೊನೆಯ ಪಂದ್ಯವನ್ನು ಆಡಿದ್ದು ಭಾರತದ ವಿರುದ್ಧವೇ.
ಸುಮಾರು 134 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಮಾರ ಸಂಗಕ್ಕರ, 12,400 ರನ್ ಕಲೆ ಹಾಕಿದ್ದಾರೆ. ಇದ್ರಲ್ಲಿ 38 ಶತಕಗಳು ಕೂಡ ಸೇರಿಕೊಂಡಿವೆ. 2015 ಆಗಸ್ಟ್ 20ರಿಂದ 24ರವರೆಗೆ ಸಾರಾ ಓವಲ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಕುಮಾರ ಸಂಗಕ್ಕರ ವಿದಾಯ ಹೇಳಿದ್ದರು. ಕೊನೆಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಕುಮಾರ ಸಂಗಕ್ಕರ ಅವರು 18 ಮತ್ತು 32 ರನ್ ದಾಖಲಿಸಿದ್ದರು.
ಆಲೆಸ್ಟರ್ ಕುಕ್ – ಆಲೆಸ್ಟರ್ ಕುಕ್ ಕೂಡ ಈ ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರಿಕೊಳ್ಳುತ್ತಾರೆ. ಯಾಕಂದ್ರೆ ಆಲೆಸ್ಟರ್ ಕುಕ್ ಕೂಡ ಇಂಗ್ಲೆಂಡ್ ಕ್ರಿಕೆಟ್ನ ಪ್ರಮುಖ ಪಿಲ್ಲರ್. ಟೆಸ್ಟ್ ಕ್ರಿಕೆಟ್ನಲ್ಲಿ ಸದ್ದಿಲ್ಲದೆ ದಾಖಲೆಗಳನ್ನು ಕೂಡ ಬರೆದಿದ್ದಾರೆ.
160 ಟೆಸ್ಟ್ ಪಂದ್ಯಗಳನ್ನು ಆಡಿರುವ ಕುಕ್ ಅವರು 12,254 ರನ್ ಗಳಿಸಿದ್ದಾರೆ. ಇದ್ರಲ್ಲಿ 32 ಶತಕ ಹಾಗೂ 56 ಅರ್ಧಶತಕಗಳಿವೆ. 2018ರಲ್ಲಿ , ಭಾರತ ವಿರುದ್ಧ ಐದನೇ ಟೆಸ್ಟ್ ಪಂದ್ಯ ಆಲೆಸ್ಟರ್ ಕುಕ್ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯ.
ಒಟ್ಟಿನಲ್ಲಿ ಟಿ-ಟ್ವೆಂಟಿ -ಏಕದಿನ ಕ್ರಿಕೆಟ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರೂ ಟೆಸ್ಟ್ ಕ್ರಿಕೆಟ್ ಮಾತ್ರ ಘನತೆಯನ್ನು ಉಳಿಸಿಕೊಂಡಿದೆ. ಪ್ರತಿಯೊಬ್ಬ ಕ್ರಿಕೆಟಿಗರು ಕೂಡ ಟೆಸ್ಟ್ ಪಂದ್ಯವನ್ನು ಆಡಬೇಕು ಅಂತ ಹಂಬಲಿಸುತ್ತಾರೆ. ಟೆಸ್ಟ್ ಕ್ರಿಕೆಟ್ನಲ್ಲೇ ವಿದಾಯ ಹೇಳಬೇಕು ಅಂತ ಅಂದುಕೊಳ್ಳುತ್ತಾರೆ. ಆದ್ರೆ ಅಂತಹ ಭಾಗ್ಯ, ಅವಕಾಶ ಎಲ್ಲ ಕ್ರಿಕೆಟಿಗರಿಗೆ ಸಿಗುವುದಿಲ್ಲ.