ಚಾಮರಾಜನಗರ, ಜೂನ್ 4: ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ಸೋಂಕು ಪ್ರಕರಣ ದಾಖಲಾಗದ ಜಿಲ್ಲೆ ನಮ್ಮ ರಾಜ್ಯದಲ್ಲಿದೆ. ಅಷ್ಟೇ ಅಲ್ಲ ಇಡೀ ದಕ್ಷಿಣ ಭಾರತದಲ್ಲಿಯೇ ಏಕೈಕ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದುವೇ ತಮಿಳುನಾಡು, ಕೇರಳ ಗಡಿಯನ್ನು ಹಂಚಿಕೊಳ್ಳುವ ಗಡಿ ಜಿಲ್ಲೆ ಚಾಮರಾಜನಗರ.
covid19india.org ನೀಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ನಡುವೆ ಗಡಿ ಜಿಲ್ಲೆ ಚಾಮರಾಜನಗರ ಹಸಿರು ವಲಯವಾಗಿಯೇ ಉಳಿದಿದೆ.

ತಮಿಳುನಾಡು, ಕೇರಳ ಗಡಿಯನ್ನು ಹಂಚಿಕೊಳ್ಳುವ ಜೊತೆಗೆ ಸುತ್ತಮುತ್ತಲಿನ ನೆರೆಯ ಮೈಸೂರು, ಮಂಡ್ಯ, ರಾಮನಗರ, ಕೊಡಗು ಜಿಲ್ಲೆಯ ಜೊತೆ ಗಡಿಯನ್ನು ಹಂಚಿಕೊಂಡಿರುವ ಚಾಮರಾಜನಗರ ದಕ್ಷಿಣ ಭಾರತದ ಕೊರೋನಾ ಮುಕ್ತ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಭಾರತದಲ್ಲಿ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗದ ಪಟ್ಟಿಯಲ್ಲಿ ಮೊನ್ನೆಯವರೆಗೆ ತೆಲಂಗಾಣದ ವಾರಂಗಲ್ ಗ್ರಾಮೀಣ ಹಾಗೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹೆಸರಿತ್ತು. ಆದರೆ ಮಂಗಳವಾರ ತೆಲಂಗಾಣದ ವಾರಂಗಲ್ ಗ್ರಾಮೀಣ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಕರ್ನಾಟಕದ ಚಾಮರಾಜನಗರ ದಕ್ಷಿಣ ಭಾರತದ ಕೊರೋನಾ ಮುಕ್ತ ಏಕೈಕ ಜಿಲ್ಲೆ ಎನಿಸಿಕೊಂಡಿದೆ.








