ವಾಷಿಂಗ್ಟನ್, ಜೂನ್ 6 : ಕಳೆದ ವಾರ ಬಂಧನದಲ್ಲಿದ್ದು, ಪೋಲಿಸ್ ಹಿಂಸೆಯಿಂದ ಮೃತಪಟ್ಟು ರಾಷ್ಟ್ರವ್ಯಾಪಿ ಜನಾಂಗೀಯ ಘರ್ಷಣೆಗೆ ಕಾರಣವಾದ ಜಾರ್ಜ್ ಫ್ಲಾಯ್ಡ್ ಗೆ ಇದು ದೊಡ್ಡ ದಿನ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ವಿವಾದವನ್ನು ಸೃಷ್ಟಿಸಿದೆ.
ಕಳೆದ ವಾರ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ, ಅಂತಹ ಘಟನೆ ಮತ್ತೊಮ್ಮೆ ಸಂಭವಿಸಲು ನಾವು ಬಿಡಬಾರದು ಎಂದು ಟ್ರಂಪ್ ಹೇಳಿದ್ದಾರೆ. ಬಿಳಿ ವರ್ಣೀಯ ಪೊಲೀಸ್ ಅಧಿಕಾರಿಯೊಬ್ಬ ಸುಮಾರು ಒಂಬತ್ತು ನಿಮಿಷಗಳ ಕಾಲ ತನ್ನ ಮೊಣಕಾಲಿನಿಂದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ನ ಕುತ್ತಿಗೆ ಅದುಮಿ ಉಸಿರುಗಟ್ಟಿಸಿ ಸಾಯಿಸಿದ್ದನು. ಇದನ್ನು ಪ್ರತಿಭಟಿಸಿ ಜನರು ನಡೆಸಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು.
ಶ್ವೇತಭವನದ ಬ್ರೀಫಿಂಗ್ ಟೆಲಿವಿಷನ್ ಸಮಯದಲ್ಲಿ ಅಧ್ಯಕ್ಷ ಟ್ರಂಪ್, ಜಾರ್ಜ್ ಇದೀಗ ಆಶಾದಾಯಕವಾಗಿ ಕೆಳಗೆ ನೋಡಿಕೊಂಡು ನಮ್ಮ ದೇಶಕ್ಕಾಗಿ ನಡೆಯುತ್ತಿರುವ ದೊಡ್ಡ ವಿಷಯ ಎಂದು ಹೇಳುತ್ತಿರಬಹುದು. ಜಾರ್ಜ್ ಫ್ಲಾಯ್ಡ್ ಗೆ ಇದು ದೊಡ್ಡ ದಿನ ಎಂದು ಹೇಳಿಕೆ ನೀಡಿದ್ದಾರೆ. ಟ್ರಂಪ್ ಹೇಳಿಕೆ ಹಲವರಲ್ಲಿ ಆಶ್ಚರ್ಯ ಮೂಡಿಸಿದೆಯಲ್ಲದೇ ಜಾರ್ಜ್ ಫ್ಲಾಯ್ಡ್ ಗೆ ದೊಡ್ಡ ದಿನವೆಂದು ಯಾಕೆ ಹೇಳಿದ್ದಾರೆ ಎಂದು ಅನೇಕರು ತಲೆಕೆಡಿಸಿಕೊಂಡಿದ್ದಾರೆ.
ನಂತರ ಟ್ರಂಪ್ ತಮ್ಮ ಮಾತನ್ನು ಮುಂದುವರಿಸುತ್ತಾ ದೇಶದ ಆರ್ಥಿಕತೆಯು ರಾಕೆಟ್ ಮೋಡ್ ನಲ್ಲಿದೆ ಎಂದು ಹೇಳಿದ್ದರು. ಹಾಗಾಗಿ ಈ ವಿಚಾರ ಕುರಿತಂತೆ ದೊಡ್ಡ ದಿನ ಎಂದು ಟ್ರಂಪ್ ಹೇಳಿಕೆ ನೀಡಿರಬಹುದು ಎನ್ನುವುದು ಇನ್ನೂ ಹಲವರ ಅಭಿಪ್ರಾಯ. ಆದರೆ ಶ್ವೇತಭವನದ ಅಧಿಕಾರಿಗಳು ಅಂತಹ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಮಾನತೆಯ ದೃಷ್ಟಿಯಿಂದ ಮತ್ತು ಕಾನೂನಿನಡಿಯಲ್ಲಿ ಇದು ಒಂದು ಶ್ರೇಷ್ಠ, ದೊಡ್ಡ ದಿನ ಎಂಬ ಅರ್ಥದಲ್ಲಿ ಟ್ರಂಪ್ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.








